ಚಾಮರಾಜನಗರ: ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಕಲಿತ ವಿದ್ಯೆಯೇ ಇಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಯುವಕನೋರ್ವ ಗಮನ ಸೆಳೆದಿದ್ದಾನೆ.
ಗೋಪಿನಾಥಂ ಗ್ರಾಮದ ಮುನಿಸ್ವಾಮಿ ಮತ್ತು ತಂಗಮಣಿ ದಂಪತಿ ಪುತ್ರ ಮುರುಗನ್(26) ಬರುವ 2022ರ ಜನವರಿಯಲ್ಲಿ ನೇಪಾಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮಿಳುನಾಡಿನ 8 ಯುವಕರೊಟ್ಟಿಗೆ ಮುರುಗನ್ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ.
ಮುರುಗನ್ ಸದ್ಯ ಎಂಕಾಂ ಪದವೀಧರನಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 6 ವರ್ಷಗಳ ಹಿಂದೆ ಹವ್ಯಾಸವಾಗಿ ರೂಢಿಸಿಕೊಂಡ ಈ ಸಮರಕಲೆಯಲ್ಲಿ ಪ್ರಾವೀಣ್ಯತೆ ಸಾಧಿಸಿ ಈಗ ಸಾಧಕನಾಗುವತ್ತ ವರಸೆ ತೋರುತ್ತಿದ್ದಾರೆ.
ಇದನ್ನೂ ಓದಿ:ಸಾಮ್ನಾ ಸಂಪಾದಕೀಯದಲ್ಲಿ ಬೆಳಗಾವಿ ಘರ್ಷಣೆ ವಿವರ : ಸರ್ಕಾರಕ್ಕೆ ಘೇರಾವ್ ಹಾಕಿದ ಪತ್ರಿಕೆ
ದೊಣ್ಣೆವರಸೆ ಚೋಳರ ಸಮರಕಲೆ:
ದೊಣ್ಣೆ ವರಸೆಯು ಚೋಳ ಮತ್ತು ಕದಂಬರ ಕಾಲದ ಸಾಂಪ್ರದಾಯಿಕ ಸಮರಕಲೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಇದಕ್ಕೆ ಬಳಸುವ ದೊಣ್ಣೆಯ ತುದಿಯಲ್ಲಿ ಮೊನಚಾದ ಕಬ್ಬಿಣ ಅಳವಡಿಸಲಿದ್ದು ಈಟಿ ಮಾದರಿಯಲ್ಲಿ ಇರಲಿದೆ. ಯುದ್ಧಕಾಲದಲ್ಲಿ ಬಹು ಜನಪ್ರಿಯವಾಗಿದ್ದ ಈ ದೊಣ್ಣೆವರಸೆ ಬರಬರುತ್ತಾ ಸ್ವಯಂ ರಕ್ಷಣೆಗೆ ಬಳಕೆಯಾಗುತ್ತಿತ್ತು. ಈಗ ಕಣ್ಮರೆಯಾಗುತ್ತಿದ್ದು, ತಮಿಳುನಾಡು ಭಾಗದಲ್ಲಿ ಇತ್ತೀಚಿಗೆ ಈ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ದೊಣ್ಣೆವರಸೆಯ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಕುಸ್ತಿ ರೀತಿ ವಿವಿಧ ರೀತಿಯ ಪಟ್ಟುಗಳನ್ನು ದೊಣ್ಣೆ ತಿರುಗಿಸುತ್ತಾ ಪ್ರದರ್ಶಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಎದುರಾಳಿಗಳಿರಲಿದ್ದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ತಮ್ಮ ವರಸೆಗಳನ್ನು ಮಾತ್ರ ಪ್ರದರ್ಶಿಸಬೇಕಾಗುತ್ತದೆ.
ಇನ್ನು, ಮುರುಗನ್ ಈಟಿವಿ ಭಾರತದೊಂದಿಗೆ ಮಾತನಾಡಿ, ತಮಿಳುನಾಡಿನ 8 ಮಂದಿ ಒಟ್ಟಿಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಗೆದ್ದೇ ಗೆಲ್ಲುತ್ತೇನೆ, ಅದಕ್ಕಾಗಿಯೇ ನಿತ್ಯ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಎರಡು ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವೆ ಎಂದು ವಿಶ್ವಾಸ ಹೊರ ಹಾಕಿದರು. ವೀರಪ್ಪನ್ ಎಂಬ ನರಹಂತಕನ ಗ್ರಾಮದಲ್ಲಿ ಇತ್ತೀಚೆಗೆ ಹಲವಾರು ಪ್ರತಿಭಾ ಕುಸುಮಗಳು ಅರಳುತ್ತಿರುವುದಕ್ಕೆ ಮುರುಗನ್ ಉದಾಹರಣೆಯಾಗಿದ್ದಾರೆ.