ಚಾಮರಾಜನಗರ : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾದ ಇಂದು ದೇಶದೆಲ್ಲೆಡೆ ಹುತಾತ್ಮ ಅರಣ್ಯಾಧಿಕಾರಿಗಳನ್ನು ನೆನೆಯುತ್ತಾರೆ. ಆದರೆ, ಕಾಡುಗಳ್ಳ, ದಂತಚೋರ ವೀರಪ್ಪನ್ ಊರಿನಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸನ್ನನ್ನು ಜನರು ನೆನೆಯುತ್ತಾರೆ.
ಶ್ರೀನಿವಾಸನ್ ಕಾಡುಗಳ್ಳ ವೀರಪ್ಪನ್ ಸಂಚಿಗೆ ಬಲಿಯಾಗಿ 27 ವರ್ಷಗಳಾಗುತ್ತಾ ಬಂದರೂ ನೆಚ್ಚಿನ ಅಧಿಕಾರಿಯನ್ನು ನೆನೆದು ಇಂದಿಗೂ ಗೋಪಿನಾಥಂ ಗ್ರಾಮದ ಜನರು ಕಣ್ಣೀರು ಹಾಕುತ್ತಾರೆ. ದೇವಾಲಯದಲ್ಲಿ ಅವರ ಫೋಟೋ ಇಟ್ಟು ಪೂಜಿಸುತ್ತಾರೆ, ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದಲ್ಲಿ ಅವರ ಫೋಟೋ ಸಮೇತ ಆಹ್ವಾನ ಪತ್ರಿಕೆ ಮುದ್ರಿಸುತ್ತಾರೆ.
ಕಾಡುಗಳ್ಳನ ಊರಲ್ಲಿ ಅಧಿಕಾರಿಯೇ ದೇವರು: ವೀರಪ್ಪನ್ ಮರೆಯಾದರೂ ಶ್ರೀನಿವಾಸನ್ ಅಮರ..! ಅಪ್ಪಟ ಅಹಿಂಸಾವಾದಿಯಾಗಿದ್ದ ಪಿ.ಶ್ರೀನಿವಾಸನ್ ಮಹಾತ್ಮಾ ಗಾಂಧೀಜಿ, ವಿನೋಬಾ ಭಾವೆಯಿಂದ ಪ್ರಭಾವಿತರಾಗಿ ಕಾಡುಗಳ್ಳ ವೀರಪ್ಪನ್ನನ್ನು ಅಹಿಂಸೆಯಿಂದಲೇ ಬದಲಾಯಿಸುತ್ತೇನೆ ಎಂಬ ನಂಬಿಕೆ ಇಟ್ಟಿದ್ದರು. ಆದ್ರೆ, ಆ ನಂಬಿಕೆಯೇ ಅವರನ್ನು ಬಲಿ ಪಡೆಯಿತು ಎನ್ನುತ್ತಾರೆ ಗ್ರಾಮಸ್ಥರು.
ದಂತಚೋರ ವೀರಪ್ಪನ್ ಕೇವಲ ಒಂದು ಬಾರಿ ಮಾತ್ರ ಪೊಲೀಸರಿಗೆ ಸೆರೆಸಿಕ್ಕಿದ್ದ. 1980 ರಲ್ಲಿ ಬೆಂಗಳೂರು ಸಾರ್ಕ್ ಸಮ್ಮೇಳನ ನಡೆಯುವ ವೇಳೆ ವೀರಪ್ಪನ್ನನ್ನು ಬಂಧಿಸಿ ಅರಣ್ಯ ಇಲಾಖೆಗೆ ಬೆಂಗಳೂರಿನ ಅಧಿಕಾರಿಗಳು ಒಪ್ಪಿಸಿದ್ದರು. ನಂತರ ಚಾಮರಾಜನಗರದ ಬೂದಿಪಡಗ ಗೆಸ್ಟ್ ಹೌಸ್ನಲ್ಲಿ 3 ದಿನ ವಿಚಾರಣೆ ನಡೆಸಲಾಗಿತ್ತು.
ಇನ್ನು ಅರಣ್ಯ ಅಧಿಕಾರಿ ಶ್ರೀನಿವಾಸನ್ ರೌಂಡ್ಸ್ಗೆ ಹೋದ ವೇಳೆ ಗೆಸ್ಟ್ ಹೌಸ್ ನಿಂದ ಪರಾರಿಯಾದ ವೀರಪ್ಪನ್ ಇನ್ನೆಂದೂ ಪೊಲೀಸರಿಗಾಗಲಿ, ಅರಣ್ಯಾಧಿಕಾರಿಗಳಿಗಾಗಲಿ ಜೀವಂತವಾಗಿ ಸಿಗಲಿಲ್ಲ.
ನಂತರ ನಾನು ಶರಣಾಗುತ್ತೇನೆಂದು ಸಂಚು ಮಾಡಿದ ವೀರಪ್ಪನ್, ಡಿಸಿಎಫ್ ಶ್ರೀನಿವಾಸನ್ ಅವರನ್ನು 1991 ನವೆಂಬರ್ 10 ರಂದು ಗೋಪಿನಾಥಂನಿಂದ ನಲ್ಲೂರು ಬಳಿ ಕರೆಸಿ ತಲೆ ಕತ್ತರಿಸಿ ಬರ್ಬರವಾಗಿ ಕೊಂದು ಹಾಕುತ್ತಾನೆ.
ಅಪ್ಪಟ ಗಾಂಧಿವಾದಿಯಾಗಿದ್ದ ಸಾಹೇಬರು ತಮಗೆ ಮನೆಗಳನ್ನು ಕಟ್ಟಿಸಿಕೊಟ್ಟರು, ಮಾರಿಯಮ್ಮ ದೇಗುಲ ನಿರ್ಮಿಸಿ ಕೊಟ್ಟಿದ್ದಾರೆ. ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದು, ಗ್ರಾಮದ ದೇವಾಲಯದಲ್ಲಿ ಸಾಹೇಬರಿಗೆ ಪ್ರಥಮ ಪೂಜೆ ಎನ್ನುತ್ತಾರೆ ಗೋಪಿನಾಥಂ ಗ್ರಾಮದ ಯಜಮನ ಭೂಪಾಲ್ ಗೌಂಡ.