ಚಾಮರಾಜನಗರ: ಕೊರೊನಾ, ಕೊರೊನಾ ಎಂದು ಇಡೀ ದೇಶವೇ ಸ್ತಬ್ಧವಾದಾಗ ಪ್ರಾಣ ಪಣಕ್ಕಿಟ್ಟು ಕೋವಿಡ್ ಸೋಂಕಿತರ ಆರೈಕೆ ಮಾಡಿದವರು ಶುಶ್ರೂಷಕಿಯರು. ಮನೆ, ಮಕ್ಕಳು, ಹಸಿವು - ನೀರಡಿಕೆಗಳನ್ನು ಬದಿಗೊತ್ತಿ ದುಡಿದ ಮಹಿಳಾಮಣಿಗಳು ಈಗಲೂ ಸಾರ್ಥಕ ಭಾವ ಕಾಣುತ್ತಿದ್ದಾರೆ.
ಫ್ರಂಟ್ ಲೈನ್ ವಾರಿಯರ್ಸ್ ಮನದಾಳ... ರೋಗಿಯ ಕುಟುಂಬವೇ ದೂರ ತಳ್ಳಿದ ವೇಳೆ ಭಯ ಬಿಟ್ಟು ಸೇವೆ ಸಲ್ಲಿಸಿದ ಶುಶ್ರೂಷಕಿಯರು ಮಹಿಳಾ ದಿನದ ಪ್ರಯುಕ್ತ ಈಟಿವಿ ಭಾರತದೊಂದಿಗೆ ಮನದಾಳ ಹಂಚಿಕೊಂಡಿದ್ದಾರೆ. ಅಂದು ತಾವು ಅನುಭವಿಸಿದ ಒತ್ತಡ, ಮತ್ತಷ್ಟು ಗಟ್ಟಿಯಾದ ಬಗೆ ಮೆಲುಕು ಹಾಕಿದ್ದಾರೆ.
ನೇತ್ರಾ: ’’ಕೋವಿಡ್, ಶುಶ್ರೂಷಕಿಯರಿಗೆ ಒಂದು ಪಾಠ ಕಲಿಸಿತು. ನರ್ಸ್ಗಳ ಸೇವೆ ಜಗತ್ತಿಗೆ ತಿಳಿಯಿತು. ಆಸ್ಪತ್ರೆ ಡ್ಯೂಟಿ ಮುಗಿಸಿದರೂ ಮಕ್ಕಳು, ಹಿರಿಯರೊಂದಿಗೆ ಬೆರೆಯಲಾಗುತ್ತಿರಲಿಲ್ಲ. ಮನೆಯವರಿಗಿಂತ ಹೆಚ್ಚು ಸಮಾಜಕ್ಕೆ ಹೆಚ್ಚು ಸೇವೆ ಮಾಡಿದೆವು. ಭಯದ ವಾತಾವರಣದಲ್ಲಿ ಇಷ್ಟು ಕಷ್ಟಪಡುವ ಅಗತ್ಯವಿತ್ತೇ, ನರ್ಸ್ ಕೆಲಸ ಬೇಕಾ ಎಂಬ ಭಾವನೆ ಮೂಡುತ್ತಿತ್ತು. ಆದರೆ, ಸೋಂಕಿತರು ಗುಣಮುಖರಾಗಿ ತೆರಳುವ ಮುನ್ನ ನಮಗೆ ಕೈ ಮುಗಿದು ತೆರಳಿದಾಗ ನಮಗೊಂದು ಸಾರ್ಥಕ ಭಾವನೆ ಮೂಡುತ್ತಿತ್ತು. ಸಂಬಳಕ್ಕಿಂತ ಹೆಚ್ಚು ಸಂತಸ ರೋಗಿ ಗುಣಮುಖನಾದಾಗ ಆಗುತ್ತಿತ್ತು’’.
ವಾಣಿ: ’’ಹೆರಿಗೆ ವಿಭಾಗದಲ್ಲಿ ನಾನು ಕೊರೊನಾ ಕಾಲದಲ್ಲಿ ಕಾರ್ಯ ನಿರ್ವಹಿಸಿದೆ. ಪಿಪಿಐ ಕಿಟ್ ಹಾಕಿಕೊಳ್ಳುವುದು ಹೇಗೆ ಎಂಬುದೇ ಮೊದಮೊದಲು ಗೊತ್ತಿರಲಿಲ್ಲ. ಹಬ್ಬಗಳಲ್ಲಿ ಮಕ್ಕಳೊಂದಿಗೆ ಇರಲಾಗಲಿಲ್ಲ. ಸಾಮಾನ್ಯ ಗೃಹಿಣಿಯರಂತೆ ಇರಬಹುದಾಗಿತ್ತು ಎಂದು ಆರಂಭದಲ್ಲಿ ಅನಿಸುತ್ತಿತ್ತು. ಸಮಯ ಕಳೆದಂತೆ, ಓರ್ವ ಮಹಿಳೆಯಾಗಿ ನಮಗೆ ಶಕ್ತಿ, ಧೈರ್ಯ ತುಂಬಿತು. ಮಹಿಳೆಯರಿಗೆ ಹಲವಾರು ಸಮಸ್ಯೆಗಳಿರುತ್ತವೆ ಇದನ್ನೆಲ್ಲಾ ಮೆಟ್ಟಿ ನಾವು ದುಡಿದು, ಸೇವೆ ಸಲ್ಲಿಸಿದೆವು, ಕೊರೊನಾ ವಾರಿಯರ್ ಎಂದು ಕರೆಸಿಕೊಳ್ಳಲು ನನಗೆ ಹೆಮ್ಮೆ ಇದೆ’’.
ಮಹಾದೇವಮ್ಮ: ’’6-8 ತಾಸು ಪಿಪಿಐ ಕಿಟ್ ಧರಿಸಿದಾಗ ಶೌಚಾಲಯಕ್ಕೆ ತೆರಳಬೇಕಾಗುತ್ತದೆ ಎಂದು ಊಟ, ನೀರು ಕೂಡ ಸೇವಿಸುತ್ತಿರಲಿಲ್ಲ. ಐಸಿಯುನಲ್ಲಿ 10 ದಿನ ಕೆಲಸ ಮಾಡಬಹುದು. ಆದರೆ, ಕೊರೊನಾ ವಾರ್ಡ್ಗೆ ತೆರಳಲೇ ಅಂಜಿಕೆಯಿತ್ತು. ಆದರೆ, ಸೇವೆ ಸಲ್ಲಿಸಲು ದೇವರೆ ನಮಗೊಂದು ಅವಕಾಶ ಕೊಟ್ಟಿದ್ದಾನೆ, ಎಂದು ಸೇವೆ ಸಲ್ಲಿಸಿದೆವು. ಕೊರೊನಾ ಡ್ಯೂಟಿಯಿಂದ ನಾವು ಮತ್ತಷ್ಟು ಶಕ್ತಿವಂತರಾದೆವು. ಆತ್ಮವಿಶ್ವಾಸ ಹೆಚ್ಚಾಗಿ, ಸೇವೆಯ ಮತ್ತೊಂದು ಮಜಲು ಅರ್ಥವಾಯಿತು.’’
ನಂದಿನಿ: ’’ಕೊರೊನಾದಲ್ಲಿ ಕೆಲಸ ಮಾಡಿದ ಕ್ಲಿಷ್ಟಕರ ಅನುಭವ ನಮಗೆ ಮಾತ್ರ ಗೊತ್ತು. ನಮ್ಮ ಆರೋಗ್ಯದ ಬಗ್ಗೆ ಕಾಳಜಿಯೂ ಇಲ್ಲದೇ ದುಡಿದೆವು. ಸಹೋದ್ಯೋಗಿಗಳಿಗೆ ಕೊರೊನಾ ತಗುಲಿದಾಗ, ಪಿಪಿಐ ಕಿಟ್ ಧರಿಸಿದ್ದ ಕೆಲವರು ಅಸ್ವಸ್ತರಾಗಿ ಬಿದ್ದ ಘಟನೆಗಳು ಕಂಡು ಬೆಚ್ಚಿದ್ದೇವೆ. ನರ್ಸ್ ಗಳು ಎಂದರೇ ಅಸಡ್ಡೆಯಾಗಿ ಕಾಣುತ್ತಿದ್ದರು. ಆದರೆ. ಮಹಾಮಾರಿಯಿಂದಾಗಿ ನಮ್ಮನ್ನು ವಾರಿಯರ್ಸ್ಗಳು ಎಂದು ಗುರುತಿಸಿದ್ದಾರೆ. ವಾರಿಯರ್ಸ್ ಆಗಿ ದುಡಿದಿದ್ದಕ್ಕೆ ಸಂತಸ- ಆಪ್ತರನ್ನು ಕಳೆದುಕೊಂಡದ್ದಕ್ಕೆ ಬೇಸರ ಎರಡೂ ಇದೆ’’
ಚಂದ್ರಕಲಾ: ’’ನನಗೆ ನಾಲ್ಕು ವರ್ಷದ ಮಗುವಿದೆ. ಕೊರೊನಾ ಸಮಯದಲ್ಲಿ ಹತ್ತಿರ ಹತ್ತಿರ 1 ವರ್ಷ ದೂರದಿಂದಲೇ ಮಗುವನ್ನು ಸಂತೈಸುತ್ತಿದ್ದೆ. ಕೊರೊನಾದಲ್ಲಿ ಮಹಿಳೆಯಾಗಿ ದುಡಿದ ನನಗೆ ಸೇವೆಯ ಮತ್ತೊಂದು ಎತ್ತರ ಪರಿಚಯವಾಯಿತು. ನರ್ಸ್ಗಳಿಗೆ ಕೊರೊನಾ ಶಕ್ತಿ, ವಿಶ್ವಾಸ, ಧೈರ್ಯ ಕಲಿಸಿತು. ಸದ್ಯ, ಈಗ ಲಸಿಕೆ ಬಂದಿದ್ದು ಮೊದಲಿದ್ದ ಅಂಜಿಕೆ ಈಗಿಲ್ಲ.