ಚಾಮರಾಜನಗರ: ಕಾಂಗ್ರೆಸ್ನ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇಂದು ಚಾಮರಾಜನಗರದಲ್ಲಿ ಚಾಲನೆ ದೊರೆಯಿತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್ ಕೊಡುವ ಮೂಲಕ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಲನೆ ನೀಡಿದರು. ಟಿಕೆಟ್ ಪಡೆಯುತ್ತಿದ್ದ ಮಹಿಳೆಯರು ಸಿದ್ದರಾಮಯ್ಯಗೆ ಜೈ, ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ನಂತರ ಸಚಿವ ವೆಂಕಟೇಶ್ ಮಾತನಾಡಿ, ಇಂದಿನಿಂದ ಉಚಿತ ಬಸ್ ಪ್ರಯಾಣ ಆರಂಭವಾಗುತ್ತಿದೆ. ಮೈಸೂರಿಗೆ ಹೋಗುವವರು ಚಾಮುಂಡಿ ಬೆಟ್ಟಕ್ಕೆ ಹೋಗಿ, ಅಲ್ಲಿ ದೇವರ ದರ್ಶನ ಪಡೆದು ಒಳ್ಳೆಯಾದಗಲಿ ಎಂದು ಕೇಳಿಕೊಳ್ಳಿ ಎಂದರು. ಕಾಂಗ್ರೆಸ್ನ ಶಕ್ತಿ ಯೋಜನೆಯಿಂದ ವಾರ್ಷಿಕ 4000 ಕೋಟಿ ಹೊರೆ ಬೀಳಲಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಯಾವ ಮೂಲೆಯಿಂದ ಖಜಾನೆಗೆ ಹಣ ತರಬೇಕೆಂದು, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆ ಸುಳ್ಳು, ಜಾರಿಯಾಗುವುದೇ ಇಲ್ಲಾ ಎಂದು ಹೇಳುತ್ತಿದ್ದರು. ಆದರೆ ಇಂದು ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.
ದೇಶದಲ್ಲೇ ಮಾದರಿ ಸರ್ಕಾರ: ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯನ್ನು ಜಾರಿ ಮಾಡುವ ಮೂಲಕ ದೇಶದಲ್ಲೇ ಕರ್ಣಾಟಕ ಮಾದರಿ ಸರ್ಕಾರ ಎನಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲೇ ಆರ್ಥಿಕ ವಿಚಾರದ ಮೇಧಾವಿ ಎನಿಸಿಕೊಂಡಿದ್ದಾರೆ. ನಾವೆಲ್ಲಾ ರೂಪಿಸಿರುವುದು ಬಡವರ ಪರ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲೂ ನಮ್ಮನ್ನು ಬೆಂಬಲಿಸಬೇಕೆಂದು ಕೋರಿದರು. ಇನ್ನು ಇಂದಿನಿಂದ ಉಚಿತ ಬಸ್ ಪ್ರಯಾಣ ಆರಂಭವಾದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಮಹಿಳರ ದಂಡು ಕಂಡುಬಂದಿತು.