ಚಾಮರಾಜನಗರ: ಆರೋಗ್ಯ ಅವ್ಯವಸ್ಥೆಗೆ ಕನ್ನಡಿ ಹಿಡಿಯುವಂತೆ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಹೆರಿಗೆ ನೋವಲ್ಲಿದ್ದ ಪತ್ನಿಯನ್ನು ಪತಿ ಬೈಕ್ನಲ್ಲಿ ಕರೆತಂದಿರುವ ಘಟನೆ ನಡೆದಿದೆ.
ಸೂಳೆಕೋಬೆ ಗ್ರಾಮದ ಕುಮಾರ್ ಎಂಬುವವ ಪತ್ನಿ ಕವಿತಾ ಅವರಿಗೆ ಹೆರೆಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಬೈಕ್ನಲ್ಲಿಯೇ ಕೂಡ್ಲೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಯಾರೂ ಇಲ್ಲದೇ ಆಸ್ಪತ್ರೆ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಿಡಿದುಕೊಳ್ಳುವುದೋ, ಪತ್ನಿಯನ್ನು ಸಂತೈಸುವುದೋ ಎಂದು ತೋಚದೇ ಪತಿ ಕುಮಾರ್ ಆಸ್ಪತ್ರೆ ಮುಂಭಾಗವೇ ಪರದಾಡಿದ್ದಾರೆ.
ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಇದನ್ನೂ ಓದಿ:ಕರ್ಣಾಟಕ ಬ್ಯಾಂಕ್‌ಗೆ ಪ್ರತಿಷ್ಠಿತ 'ಡಿಎಕ್ಸ್ 2021 ಅವಾರ್ಡ್'
ಏನಿದು ಘಟನೆ:ಕವಿತಾ ಸೂಳೆಕೋಬೆ ತಾಯಿ ಮನೆ ಹೂಗ್ಯಂನಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಮಾರ್ ತನ್ನ ಬೈಕ್ನಲ್ಲಿಯೇ ಪತ್ನಿಯನ್ನು ಕೂರಿಸಿಕೊಂಡು 4-5 ಕಿಮೀ ದೂರವಿರುವ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.
ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಇರದೇ ಬಾಗಿಲು ಮುಚ್ಚಿದ್ದರಿಂದ ಆಸ್ಪತ್ರೆ ಮುಂಭಾಗವೇ ಕವಿತಾ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯ ಹತ್ತಿರದಲ್ಲಿದ್ದ ಸ್ಥಳೀಯರು ಇವರಿಗೆ ನೆರವಾಗಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲ ಪ್ರತಿಕ್ರಿಯಿಸಿ, ಹನೂರು ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಎಂಬುದು ಮರಿಚಿಕೆಯಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದು, ಸಂಬಂಧಪಟ್ಟ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜನರ ಸಂಕಷ್ಟ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.