ಚಾಮರಾಜನಗರ: ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಬಂಡೀಪುರದಲ್ಲಿ ಭಾನುವಾರ ವನ್ಯಜೀವಿ ಸಫಾರಿ ನಡೆಸುವರು. ಬಂಡೀಪುರಕ್ಕೆ ಭೇಟಿ ಕೊಡುತ್ತಿರುವ ಹಿರಿಮೆ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂಬ ಹಿರಿಮೆ ಅವರದ್ದಾಗಲಿದೆ. ಪ್ರಧಾನಿ ಅವರು ಬಂಡೀಪುರವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ.
ಸುವರ್ಣ ಸಂಭ್ರಮದಲ್ಲಿ ಹುಲಿರಕ್ಷಿತ ಅರಣ್ಯ ಬಂಡೀಪುರ: ಅವನತಿಯತ್ತ ತಲುಪಿದ್ದ ಹುಲಿ ಸಂತತಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂದು 1973 ರಲ್ಲಿ ಅಂದಿನ ಪಿಎಂ ಇಂದಿರಾ ಗಾಂಧಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಪ್ರಾಜೆಕ್ಟ್ ಟೈಗರ್ ಯೋಜನೆ ಆರಂಭಿಸಿದರು. ಅಂದು ಆರಂಭಗೊಂಡ ಹುಲಿ ರಕ್ಷಿತ ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದ್ದು ಈಗ ಸುವರ್ಣ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಭೇಟಿ ಕೊಡಲಿದ್ದಾರೆ.
ಆನೆ ಉಳಿಸಿದ್ದವರಿಗೆ ಶಹಬ್ಬಾಸ್ ಗಿರಿ: ಕೆಲ ತಿಂಗಳುಗಳ ಹಿಂದೆಯಷ್ಟೇ ವಿದ್ಯುತ್ ಶಾಕ್ ನಿಂದ ಪ್ರಜ್ಞೆ ಕಳೆದುಕೊಂಡು ಸಾವಿನಂಚಿಗೆ ತಲುಪಿದ್ದ ಆನೆಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಆನೆ ಉಳಿಸಿದ್ದರು. ಈ ಘಟನೆಯನ್ನು ನರೇಂದ್ರ ಮೋದಿ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಜೊತೆಗೆ, ಬಂಡೀಪುರಕ್ಕೆ ಅಂಟಿಕೊಂಡಂತೆ ಇರುವ ತೆಪ್ಪಕಾಡು ಅರಣ್ಯ ಪ್ರದೇಶಕ್ಕೆ ಭೇಟಿ ಕೊಟ್ಟು ಬೊಮ್ಮ-ಬೆಳ್ಳಿಯನ್ನು ಸನ್ಮಾನಿಸಬೇಕಾದ್ದರಿಂದ ಬಂಡೀಪುರದ ಮೂಲಕ ತೆರಳುತ್ತಿದ್ದಾರೆ.
ಟೈಗರ್ ರಿಸರ್ವ್ ನಲ್ಲಿ ಬಂಡೀಪುರ ನಂ 1: ಬಂಡೀಪುರ ಹುಲಿ ಸಂರಕ್ಷಿತ ಸುವರ್ಣ ಸಂಭ್ರಮದಲ್ಲಿರುವ ಜೊತೆಗೆ ಹುಲಿ ಸಂರಕ್ಷಿತ ಪ್ರದೇಶದಲ್ಲೇ 100ಕ್ಕೇ 97 ಅಂಕ ಪಡೆದಿದ್ದು ದೇಶದಲ್ಲೇ ನಂ೧ ಇಲ್ಲವೇ ನಂ೨ ಹುಲಿ ಸಂರಕ್ಷಿತ ಪ್ರದೇಶ ಎನಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಬಂಡೀಪುರಕ್ಕೆ ಭೇಟಿ ಕೊಡಲಿದ್ದಾರೆ ಎನ್ನಬಹುದು.
ಹುಲಿ ಗಣತಿಯಲ್ಲಿ ಕರ್ನಾಟಕವೇ ನಂ 1: ಕೆಲವೇ ಕೆಲವು ಹುಲಿಗಳ ಅಂತರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕ ಈ ಬಾರಿ ನಂ1 ನಿರೀಕ್ಷೆಯಲ್ಲಿದೆ. ಜೊತೆಗೆ, ಕರ್ನಾಟಕದಲ್ಲಿ ಅತ್ಯಧಿಕ ಹುಲಿಗಳಿರುವ ಪ್ರದೇಶವೂ ಬಂಡೀಪುರವೇ ಆಗಿರುವುದರಿಂದ ಬಂಡೀಪುರಕ್ಕೆ ಮೋದಿ ಭೇಟಿ ಕೊಡುತ್ತಿದ್ದಾರೆ.