ಚಾಮರಾಜನಗರ: ಕಬ್ಬು ತುಂಬಿದ ಲಾರಿಗಳನ್ನು ಹುಡುಕಾಡಲು ಮರಿಯೊಂದಿಗೆ ಕಾಡಾನೆಯೊಂದು ಚಾಮರಾಜನಗರ ಗಡಿಯಾದ ಪುಣಜನೂರು ಚೆಕ್ಪೋಸ್ಟ್ನಲ್ಲಿ ದಾಂಧಲೆ ನಡೆಸಿದೆ. ಜೊತೆಗೆ ಹಾರ್ನ್ ಮಾಡಿದ ವಾಹನಗಳನ್ನು ಅಟ್ಟಾಡಿಸಿದೆ.
ತಮಿಳುನಾಡು-ಕರ್ನಾಟಕ ಗಡಿಯಾದ ಪುಣಜನೂರು ಚೆಕ್‍ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಿಯೊಂದಿಗೆ ಕಾಡಾನೆ ಒಂದೂವರೆ ತಾಸು ಪರೇಡ್ ನಡೆಸಿದ್ದು, ರಸ್ತೆ ಬಿಡಲು ಹಾರ್ನ್ ಮಾಡಿದ ವಾಹನಗಳನ್ನು ಅಟ್ಟಾಡಿಸಿ ಆತಂಕ ಸೃಷ್ಟಿಸಿ ಕೊನೆಗೆ ಕಾಡು ಸೇರಿದೆ.
ರಸ್ತೆಯಲ್ಲಿ ಕಾಡಾನೆ ಪರೇಡ್, ಚಾಮರಾಜನಗರದ ದೃಶ್ಯ ವೀಕೆಂಡ್ ಮಜಾ ಮಾಡಲು ಬರುತ್ತಿದ್ದ ನೂರಾರು ಪ್ರವಾಸಿಗರು ಆನೆ ದಾಂಧಲೆಯಿಂದ ಗಲಿಬಿಲಿಗೊಂಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಆನೆಯಿಂದ ದೂರ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು, ಕೆಲವರು ಆನೆ ವಿಡಿಯೋ, ಫೋಟೋ ಸೆರೆಹಿಡಿಯಲು ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸಿ ಸವಾರರು ಹುಚ್ಚಾಟ ನಡೆಸಿದ್ದಾರೆ.
ಮರಿಯೊಂದಿಗೆ ಇರುವ ಈ ಆನೆ ಕಾಡಿಗೆ ಹೋಗದೇ ರಸ್ತೆಬದಿಯಲ್ಲೇ 10-15 ಕಿ.ಮೀ ಓಡಾಡುತ್ತಿರುತ್ತವೆ. ಕಬ್ಬು ತುಂಬಿದ ಲಾರಿ ಬಂದರೆ ತಡೆದು ಮರಿಗೂ ಕೊಟ್ಟು ತಾನು ತಿನ್ನುವ ಅಭ್ಯಾಸ ಬೆಳೆಸಿಕೊಂಡಿರುವುದು ಈ ಎಡವಟ್ಟಿಗೆ ಕಾರಣ ಎನ್ನಲಾಗ್ತಿದೆ.
ಹಗಲು ಹೊತ್ತಿನಲ್ಲಿಯೇ ಆನೆಗಳು ಲಾರಿ ತಡೆದು ಕಬ್ಬು ತಿನ್ನುತ್ತಿರುವುದರಿಂದ ನಿತ್ಯ ಅರ್ಧ-ಮುಕ್ಕಾಲು ತಾಸು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬೇಕಿದೆ. ಜೊತೆಗೆ, ಲಾರಿ ಚಾಲಕರು ರಸ್ತೆಬದಿಯಲ್ಲಿ ಕಬ್ಬು ಬಿಸಾಡಿ ಹೋಗದಂತೆ ಸೂಚಿಸಬೇಕಿದೆ.