ಚಾಮರಾಜನಗರ: ಕಳೆದ ಮೂರು ದಿನಗಳಿಂದ ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ನಿತ್ಯ ಒಂದಲ್ಲೊಂದು ಊರಿಗೆ ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದ್ದು, ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಚಾಮರಾಮನಗರ ಸಮೀಪದ ದೊಡ್ಡಕೆರೆ, ಬೂದಿತಿಟ್ಟಲ್ಲಿ ಕಾಣಿಸಿಕೊಂಡು ಜಮೀನುಗಳಲ್ಲಿ ಓಡಾಡಿದ್ದ ಗಜರಾಜ, ಬಳಿಕ ಸಿಮ್ಸ್ನ ಎಡಬೆಟ್ಟದ ಹಿಂಭಾಗ ಕಾಣಿಸಿಕೊಂಡಿದೆ. ಶುಕ್ರವಾರ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮಾರುಕಟ್ಟೆ ಸಮೀಪದ ತೆಂಗಿನಕೆರೆ ಹತ್ತಿರ ಇಡೀ ದಿನ ಬೀಡು ಬಿಟ್ಟಿತ್ತು.
ಗುಂಡ್ಲುಪೇಟೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಡಾ.ಲೋಕೇಶ್, ಎನ್.ಪಿ.ನವೀನ್‍ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ನೌಕರರು, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ವೆಂಕಟರಮಣಸ್ವಾಮಿ ದೇವಾಲಯ ಸಂರಕ್ಷಿತ ಅರಣ್ಯದ ಮೂಲಕ ಹತ್ತಿರವಿರುವ ಕುಂದಕೆರೆ ಅರಣ್ಯ ವಲಯಕ್ಕೆ ಕಾಡಾನೆ ಹೋಗುವಂತೆ ಮಾಡಲು ಕಾರ್ಯತಂತ್ರ ರೂಪಿಸಿದ್ದರು.
ಆದರೆ, ಇಂದು ಬೆಳಗ್ಗೆ ತೆರಕಣಾಂಬಿ ಕೆರೆಯಂಗಲದಿಂದಲೂ ಆನೆ ಪರಾರಿಯಾಗಿ ವೀರನಪುರ ಸಮೀಪಕ್ಕೆ ಹೋಗಿದೆ ಎಂಬ ಮಾಹಿತಿ ದೊರೆತಿದೆ. ವೀರನಪುರದಲ್ಲಿ ಆನೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ಇದನ್ನೂ ಓದಿ:'ಪ್ರೀತಿ ಹೃದಯದಲ್ಲಿರಲಿ, ಬಾಯಲ್ಲಲ್ಲ': ಅಪ್ಪು ಅಭಿಮಾನಿಗಳಿಗೆ ಶಿವಣ್ಣನ ಕಿವಿಮಾತು