ಚಾಮರಾಜನಗರ:ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಮಾವೇಶ ಅದ್ಧೂರಿಯಾಗಿ ನಡೆಯಿತು. ಬೇಗೂರಿನಿಂದ ಗುಂಡ್ಲುಪೇಟೆಗೆ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಭರ್ಜರಿ ಸ್ವಾಗತ ಕೋರಿದರು. ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ಯುವ ನಾಯಕ ಬಿ.ವೈ.ವಿಜಯೇಂದ್ರ ಮಾತನಾಡಿದರು. ಇಲ್ಲಿನ ಬಿಜೆಪಿ ಕಾರ್ಯಕಯರ್ತರನ್ನು ನೋಡಿದರೆ ನಾನೇಕೆ ಗುಂಡ್ಲುಪೇಟೆ ಕ್ಷೇತ್ರದಲ್ಲೇ ಬಂದು ಚುನಾವಣೆಯಲ್ಲಿ ನಿಲ್ಲಬಾರದು ಎಂದು ನನಗೆ ಹೊಟ್ಟೆ ಹುರಿಯುತ್ತದೆ. ರಣೋತ್ಸಾಹ ಬರುವ ರೀತಿಯಲ್ಲಿ ಜನ ಸೇರಿದ್ದೀರಿ ಎಂದು ಕಾರ್ಯಕರ್ತರನ್ನು ಹುರಿದುಂಂಬಿಸಿದರು.
ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಘವೇಂದ್ರ ಮತ್ತು ವಿಜಯೇಂದ್ರ ಒಂದು ಕಣ್ಣಾದರೆ, ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತೊಂದು ಕಣ್ಣು. ಆದ್ದರಿಂದ 50 ಸಾವಿರ ಮತಗಳ ಅಂತರದಿಂದ ನಿರಂಜನಕುಮಾರ್ ಗೆದ್ದು ಬಂದರೆ ಯಡಿಯೂರಪ್ಪ ಅವರನ್ನೇ ಗೆಲ್ಲಿಸಿದಂತೆ. ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವ ರೀತಿ ನೋಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಅಮಿತ್ ಶಾ ಹೇಳುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 140 ಸೀಟ್ ಗೆಲ್ಲಿಸಿ ಅಧಿಕಾರಕ್ಕೆ ಹಿಡಿಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷಗ್ಯಾರಂಟಿ ಕಾರ್ಡ್ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ದೇಶದಲ್ಲಿ ಈಗಾಗಲೇ ಜನರು ಕಾಂಗ್ರೆಸ್ ಕಿತ್ತು ಬಿಸಾಕುತಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಗ್ಯಾರಂಟಿ ಕಾರ್ಡ್ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜೆಡಿಎಸ್ ಅತಂತ್ರದ ಮೂಲಕ ಅಧಿಕಾರ ಹಿಡಿಯಬೇಕು ಎಂದು ಕಾದು ಕುಳಿತಿದೆ. ಆದರೆ ಡಬಲ್ ಇಂಜಿನ್ ಸರ್ಕಾರದ ಮುಂದೆ ಯಾವುದು ನಡೆಯುವುದಿಲ್ಲ. ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರ ಹಿಡಿಯಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರೇ ಖೆಡ್ಡಾ ತೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬಾರದು ಎಂದು ಒಳಗೊಳಗೆ ಬೇಗುದಿ ಬೇಯ್ಯುತ್ತಿದೆ. ಒಬ್ಬರನ್ನು ಕಂಡರೇ ಮತ್ತೊಬ್ಬರಿಗೆ ಆಗದ ಪರಿಸ್ಥಿತಿ ಕಾಂಗ್ರೆಸ್ನಲ್ಲಿದ್ದು, ಇದು ಬಿಜೆಪಿಗೆ ವರದಾನವಾಗಲಿ ಎಂದು ತಿಳಿಸಿದರು.