ಚಾಮರಾಜನಗರ: ನಾನು ಯಾವುದೇ ದಂಧೆಯಲ್ಲಿ ತೊಡಗಿಲ್ಲ, ಲೂಟಿ ಹೊಡೆದಿಲ್ಲ, ಜೂಜಾಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ನನಗೆ ಒಂದು ವೋಟ್ ಕೊಡಿ ಎಂದು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ವಾಟಾಳ್ ನಾಗರಾಜ್ ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಗ್ರಾ.ಪಂ ಸದಸ್ಯರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಒಂದು ಮತ ನನಗೆ ಕೊಡಿ, ಇನ್ನೊಂದು ವೋಟು ನೀವು ಯಾರಿಗಾದರೂ ಹಾಕಿಕೊಳ್ಳಿ. ಗ್ರಾ.ಪಂ ಸದಸ್ಯರು ಯಾವುದೇ ಒತ್ತಡ, ಆಮಿಷಕ್ಕೆ ಒಳಗಾಗದೇ ನನಗೊಂದು ಮತ ಹಾಕಬೇಕೆಂದು ಕೋರಿದರು.
ನಾನು ಗೆದ್ದ ಕೂಡಲೇ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಮೊದಲ ದಿನವೇ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಹೋರಾಡುತ್ತೇನೆ. ಗ್ರಾ.ಪಂ ಸದಸ್ಯರಿಗೆ 5 ಸಾವಿರ, ಉಪಾಧ್ಯಕ್ಷರಿಗೆ 7.5 ಸಾವಿರ ಹಾಗೂ ಅಧ್ಯಕ್ಷರಿಗೆ 10 ಸಾವಿರ ರೂ. ಗೌರವಧನ ಕೊಡಿಸುತ್ತೇನೆ ಎಂದು ವಾಟಾಳ್ ಭರವಸೆ ಕೊಟ್ಟರು.