ಚಾಮರಾಜನಗರ : ಕೇಂದ್ರ ಸರ್ಕಾರ ಯಾವ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಸಮಾನತೆಯ ಪ್ಯಾಕೇಜ್ ಘೋಷಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮೂಲೆಗುಂಪು ಮಾಡಿ ಪ್ಯಾಕೇಜ್ ಘೋಷಿಸಿದೆ. ಪ್ಯಾಕೇಜ್ ಕೂಡ ಸಮಾಧಾನಪಡುವಂತಿಲ್ಲ. ಕೊರೊನಾ ಯೋಧರಾದ ಮಾಧ್ಯಮದವರನ್ನು ಕೈಬಿಡಲಾಗಿದೆ. ಅವರಿಗೆ 2 ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ದೇಗುಲಗಳನ್ನು ಮುಚ್ಚಿ ಮದ್ಯದಂಗಡಿಗಳನ್ನು ತೆರೆದಿರುವುದು ಸರಿಯಲ್ಲ. ಇದು ರಾಜ್ಯ ಸರ್ಕಾರದ ದಿವಾಳಿತನ ತೋರಿಸುತ್ತದೆ. ಮದ್ಯದಂಗಡಿ ತೆರೆದಿದ್ದರಿಂದ ಮಹಿಳೆಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೂಡಲೇ ರಾಜ್ಯ ಸರ್ಕಾರ ಮದ್ಯದಂಗಡಿಗಳನ್ನು ಮುಚ್ಚಬೇಕು ಮತ್ತು ಪೊಲೀಸರ ಹಿತದೃಷ್ಟಿಯಿಂದ ಔರಾದ್ಕರ್ ವರದಿ ಜಾರಿ ಮಾಡಬೇಕು. ಇಲ್ಲವಾದರೆ ಇದೇ ಶನಿವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಕೊರೊನಾ ಮುಕ್ತವಾಗಿ ಚಾಮರಾಜನಗರ ಜಿಲ್ಲೆಯನ್ನು ಕಾಪಾಡಿಕೊಂಡಿರುವುದರಿಂದ ಡಿಸಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ಎಚ್. ಡಿ. ಆನಂದಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ ಗೌರವಿಸಿದರು.