ಚಾಮರಾಜನಗರ : ಮುಂದಿನ ಬಾರಿ ವಿಧಾನಸಭೆಗೆ ಯಾವ ರೀತಿ ಶಾಸಕರು ಬರ್ತಾರೆ ಅಂತಾ ಗೊತ್ತಿಲ್ಲ. ಶಾಸನಸಭೆಯಲ್ಲಿ ಹೊಡೆದಾಟ ಆಗುತ್ತೆ, ಹೆಚ್ಚು ಕಮ್ಮಿಯಾದರೆ ಮುಖ್ಯಮಂತ್ರಿಗೂ ಹೊಡಿತಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭವಿಷ್ಯ ನುಡಿದಿದ್ದಾರೆ.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಆಯೋಜಿಸಿದ್ದ ಚಾಮರಾಜನಗರದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ಶಾಸನಸಭೆಯಲ್ಲಿ ಹೊಡೆದಾಟ ಆಗುತ್ತೆ. ಮಂತ್ರಿಗಳು ಹೆಚ್ಚು ಕಡಿಮೆಯಾದರೇ ಮುಖ್ಯಮಂತ್ರಿಗೂ ಹೊಡಿತಾರೆ. ಆ ವೇಳೆ ಒಬ್ಬ ವಾಟಾಳ್ ನಾಗರಾಜ್ ವಿಧಾನಸಭೆಯಲ್ಲಿ ಇರಬೇಕು. ಸೋಲು ಗೆಲುವು ಬೇರೆ ವಿಚಾರ. ಈ ಬಾರಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಎಂದು ಇದೇ ಸಂದರ್ಭದಲ್ಲಿ ಘೋಷಿಸದರು.
ನಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ, ತನ್ನನ್ನು ಬೆಂಬಲಿಸಬೇಕು. ಹಣ, ಜಾತಿ, ಧರ್ಮ ನೋಡಬೇಡಿ. ನನ್ನ ಕೆಲಸ ನೋಡಿ ವೋಟು ಕೊಡಿ ಎಂದು ಮನವಿ ಮಾಡಿದರು.