ಕರ್ನಾಟಕ

karnataka

ETV Bharat / state

ಆರ್​ಎಸ್ಎಸ್​ನಿಂದ ರಾಜ್ಯ ಹಾಳು, ಯೋಗಿ‌ ಮಾದರಿ ಸರ್ಕಾರ ಜಾರಿಗೆ ಬಿಡಲ್ಲ: ವಾಟಾಳ್

ಬಡವರು, ಹಿಂದುಳಿದವರು ಹಾಗೂ ಮುಸಲ್ಮಾನರ ಮನೆಗಳನ್ನು ಒಡೆಯೋದು. ಇದು ಆರ್‌ಎಸ್‌ಎಸ್, ಬಿಜೆಪಿಯವರ ನೀತಿಯಾಗಿದೆ. ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ ಜಾರಿಗೆ ಅವಕಾಶ ಕೊಡಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹೇಳಿದ್ದಾರೆ.

ವಾಟಾಳ್
ವಾಟಾಳ್

By

Published : Aug 7, 2022, 7:54 PM IST

ಚಾಮರಾಜನಗರ:ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೊದಲು ಜಾತಿರಾಜಕಾರಣ ಬಿಡಬೇಕು. ಕರ್ನಾಟಕದಲ್ಲಿ ಭಾಷೆಗೆ ಮೊದಲ ಆದ್ಯತೆ. ಜಾತಿಕೋಮುಗಳ ಸಂಘರ್ಷ ನಿಲ್ಲಲಿ. ಒಬ್ಬರ ನಂತರ ಒಬ್ಬರು ಕೊಲೆಯಾಗುತ್ತಿದ್ದು, ಕೊಲೆಗಳ ರಾಜ್ಯ ಆಗುತ್ತಿದೆ. ರಾಜ್ಯವನ್ನು ಕೊಲೆಗಳಿಂದ ತಪ್ಪಿಸಬೇಕು. ಇದು ಕನ್ನಡ ರಾಜ್ಯ. ಇದು ಜಾತಿ, ಕೋಮು ರಾಜ್ಯವಲ್ಲ.‌ ಎಲ್ಲ ರಾಜಕಾರಣಿಗಳು ಮೊದಲು ಜಾತಿ ರಾಜಕಾರಣ ಬಿಡಿ ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್​ ಆಗ್ರಹಿಸಿದರು.

ಯೋಗಿ ಮಾದರಿ ಸರ್ಕಾರ ಎಂದರೆ ಸೇಬು, ಮಾವಿನಹಣ್ಣು ತಿನ್ನುವುದಲ್ಲ. ಬುಲ್ಡೋಜರ್, ಜೆಸಿಬಿ ತಂದು ಮನೆಗಳನ್ನು ಉರುಳಿಸೋದು. ಬಡವರು, ಹಿಂದುಳಿದವರು ಹಾಗೂ ಮುಸಲ್ಮಾನರ ಮನೆಗಳನ್ನು ಒಡೆಯೋದು. ಇದು ಆರ್‌ಎಸ್‌ಎಸ್, ಬಿಜೆಪಿಯವರ ನೀತಿಯಾಗಿದೆ. ಆರ್‌ಎಸ್‌ಎಸ್, ಬಿಜೆಪಿಯವರು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ ಎಂದು ಕಿಡಿಕಾರಿದರು.

ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಆದರೆ ಪಾಪ ಅವರು ರಾಜಕಾರಣದಲ್ಲಿ ತೇಲಾಡುತ್ತಿದ್ದಾರೆ. ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ ಮಾಡುತ್ತೇನೆ ಎಂದಿದ್ದಾರೆ. ಯೋಗಿ ಸರ್ಕಾರ ಎಂದರೆ ಇಂಡಿಯಾ ಸರ್ಕಾರನಾ? ಅಥವಾ ಪಾರ್ಲಿಮೆಂಟ್ ತೀರ್ಮಾನವಾ. ಅವರು ಯಾವುದೇ ಕಾರಣಕ್ಕೂ ಬಡವರ ಮನೆಗಳನ್ನು ಒಡೆಯಲು ಬಂದ್ರೆ ಕನ್ನಡ ಚಳವಳಿ ವಾಟಾಳ್ ಪಕ್ಷ ಬುಲ್ಡೋಜರ್, ಜೆಸಿಬಿ ಮುಂದೆ ನಿಲ್ಲುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ:ದೇಶದ ಹದಗೆಟ್ಟ ವ್ಯವಸ್ಥೆ ಸರಿಪಡಿಸಲು ಯಾರಿಗೂ ಸಾಧ್ಯ ಇಲ್ಲ: ನಟ ಪ್ರಕಾಶ್ ರಾಜ್​​​

ರಾಜ್ಯದಲ್ಲಿ ಹಿಂದೆಂದೂ ಕಾಣದಂತ ಭೀಕರ ಮಳೆ ಸುರಿದಿದೆ.‌ ನದಿ, ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಸಾವಿರಾರು ಕೋಟಿ ರೂ.ಬೆಳೆ ನಷ್ಟವಾಗಿದೆ. ಇದನ್ನು ವೀಕ್ಷಿಸಲು ಪ್ರಧಾನಿಮಂತ್ರಿಗಳು ಬರಬೇಕಾಗಿತ್ತು. ಕೇಂದ್ರ ಸರ್ಕಾರ ಕೂಡಲೇ ನಷ್ಠವಾಗಿರುವ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕಕ್ಕೆ ಅನ್ಯಾಯ ಮಾಡಿದಂತಾಗಲಿದೆ ಎಂದರು. ಇದೇ ವೇಳೆ ಪಾಲಿಸ್ಟರ್​ ಧ್ವಜ ಬಳಕೆಗೆ ಅವಕಾಶ ಕೊಟ್ಟಿರುವುದನ್ನು ವಿರೋಧಿಸಿದ ಅವರು ಖಾದಿ ಧ್ವಜವೇ ಶ್ರೇಷ್ಠ, ಅದನ್ನೇ ಬಳಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details