ಚಾಮರಾಜನಗರ: ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನು ದೇಶಕ್ಕೆ ತರುವಲ್ಲಿ ಭಾರತ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದವರು ಮೃತನ ನಿವಾಸಕ್ಕೆ ತೆರಳಿ ಸುಮ್ಮನೆ ಮೊಸಳೆ ಕಣ್ಣೀರು ಹಾಕಿ ಸಾಂತ್ವನ ಹೇಳಿದ್ದಾರೆಯೇ ಹೊರತು ಪಾರ್ಥಿವ ಶರೀರ ತರುವ ಪ್ರಯತ್ನ ಮಾಡಿಲ್ಲ. ನವೀನ್ ಪಾರ್ಥಿವ ಶರೀರ ತರುವಂತೆ ಒತ್ತಾಯಿಸಿ ಮಾರ್ಚ್ 18ರಂದು ಹಾವೇರಿ ಜಿಲ್ಲಾಡಳಿತ ಭವನದ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ನಂತರ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಉಕ್ರೇನ್ನಿಂದ ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಿಎಂ ಬೊಮ್ಮಾಯಿ ಸಹ ಈ ಕುರಿತಂತೆ ಪ್ರಯತ್ನಗಳು ನಡೆದಿವೆ ಎಂದಿದ್ದಾರೆ.