ಚಾಮರಾಜನಗರ :ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ತಾಕತ್ ಇದ್ದರೇ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರಿಗೆ 'ಭಾರತ ರತ್ನ' ಕೊಡಿಸಿ ಎಂದು ಚಾಮರಾಜನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸವಾಲೆಸೆದರು.
ಬೆಂಗಳೂರಿನಿಂದ ತಮಿಳುನಾಡು ಗಡಿವರೆಗೆ ರ‍್ಯಾಲಿ ನಡೆಸುವ ವೇಳೆ ಚಾಮರಾಜನಗರದಲ್ಲಿ ಅವರು ಮಾತನಾಡಿದರು. ಯಡಿಯೂರಪ್ಪ ಅವರೇ ಸಿದ್ಧಗಂಗಾ ಮಠಕ್ಕೆ ಆಗಾಗ್ಗೆ ತೆರಳಿ ಪೂಜೆ ಸಲ್ಲಿಸುತ್ತೀರಿ. ಪ್ರಧಾನಿ ಮೋದಿ ಅವರು ಮಠಕ್ಕೆ ಭೇಟಿ ನೀಡಿ ಅಲ್ಲಿನ ದಾನ-ಧರ್ಮ, ಕಾಯಕ ಕಂಡಿದ್ದೀರಿ. ಆದರೂ ಅವರಿಗೆ ಇನ್ನೂ ಭಾರತ ರತ್ನ ಕೊಟ್ಟಿಲ್ಲ. ಸಚಿನ್ ತೆಂಡೂಲ್ಕರ್ ಅವರಿಗೆ ಕೊಡುತ್ತೀರಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.
ಸಿಎಂಗೆ ವಾಟಾಳ್ ನಾಗರಾಜ್ ಸವಾಲು ನಾನು ಶಾಸಕನಾಗಿದ್ದರೆ ಹೋರಾಟ ಮಾಡಿ ಎರಡೇ ತಿಂಗಳಿಗ ಶ್ರೀಗಳಿಗೆ ಭಾರತ ರತ್ನ ಕೊಡಿಸುತ್ತಿದ್ದೆ. ಚಾಮರಾಜನಗರದಲ್ಲಿ ಬಸವ ಭವನ ನಿರ್ಮಿಸಲು ನಿವೇಶನ ಕೊಡಿಸಿದ್ದೀನಿ. ಆದರೆ, ಈವರೆಗೆ ಅಲ್ಲಿ ಒಂದ್ ಬೋರ್ಡ್ ಹಾಕಲಾಗಿಲ್ಲ. ಯಡಿಯೂರಪ್ಪ ಅವರೇ ನಿಮಗೆ ಚಾಲೆಂಜ್ ಮಾಡುತ್ತೇನೆ, ತಾಕತ್ ಇದ್ದರೆ ಒಂದೇ ಕಂತಿನಲ್ಲಿ ಬಸವ ಭವನ ನಿರ್ಮಾಣಕ್ಕೆ 20 ಕೋಟಿ ರೂ. ಕೊಡಿ ಎಂದು ಸವಾಲೆಸೆದರು.
ನನ್ನನ್ನು ಸೋಲಿಸಿರುವುದಕ್ಕೆ ನನಗೇನು ನಷ್ಟವಿಲ್ಲ. ಚಾಮರಾಜನಗರದ ಜನತೆಗೆ ನಷ್ಟ. ಚಾಮರಾಜನಗರ ಜಿಲ್ಲೆ ಮಾಡಿದ್ದು ನಾನು. ಜಿಲ್ಲೆಗೆ ಕಾವೇರಿ ಕುಡಿಯುವ ನೀರು ತಂದಿದ್ದು ನಾನು ಎಂದರು. ಇದಾದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ವಾಟಾಳ್ ರ‍್ಯಾಲಿ ಮುಂದುವರೆಸಿದರು.