ಚಾಮರಾಜನಗರ: ಮಾನ್ಸೂನ್ ನಂತರ ಕಾಣಿಸಿಕೊಳ್ಳುತ್ತಿದ್ದ ಕಾಲುಬಾಯಿ ಜ್ವರ ಈಗ ಎರಡು ತಿಂಗಳ ಮುಂಚೆಯೇ ಗುಂಡ್ಲುಪೇಟೆ ತಾಲೂಕಿನ ಹಲವೆಡೆಗಳಲ್ಲಿ ಕಾಣಿಸಿಕೊಂಡಿದ್ದು, ಹತ್ತಾರು ಜಾನುವಾರುಗಳು ಅಸುನೀಗಿದೆ. ಇದರೊಟ್ಟಿಗೆ ಲಸಿಕೆ ಅಭಾವವೂ ತಲೆದೋರಿದೆ.
ಕೊರೊನಾ ಕಾಲದಲ್ಲಿ ಲಸಿಕೆಗಾಗಿ ಜನರು ಪರದಾಡುತ್ತಿರುವಂತೆ ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ಕಾಪಾಡಿಕೊಳ್ಳಲು ಹೈನುಗಾರರು ಪರದಾಡುತ್ತಿದ್ದಾರೆ. ಮುಂಗಾರು ಮಳೆ ಹೊತ್ತಿಗೆ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ನಡೆಸುತ್ತಿದ್ದ ಪಶು ಸಂಗೋಪನಾ ಇಲಾಖೆ ಈ ಬಾರಿ ಲಸಿಕೆ ಕೊಡಲು ಒದ್ದಾಡುತ್ತಿದೆ.
ಆದ್ಯತೆ ಮೇರೆಗೆ ಲಸಿಕೆ ಕೊಡುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿರುವುದರಿಂದ ಕಾಲುಬಾಯಿ ಜ್ವರ ಬಂದವುಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗಷ್ಟೇ ಲಸಿಕೆ ಪ್ರಾಪ್ತಿಯಾಗುತ್ತಿದೆ. ಅದು ಕೂಡ ಲಸಿಕೆ ಪೂರೈಕೆಯಾಗದಿದ್ದರಿಂದ ಇಲಾಖೆಯು ಲಸಿಕೆ ಖರೀದಿಸಿ ಕೊಡಬೇಕಾಗಿದೆ. ಜಿಲ್ಲೆಯಲ್ಲಿ 2.60 ಲಕ್ಷ ಜಾನುವಾರುಗಳಿದ್ದು, ಈಗ ಗುಂಡ್ಲುಪೇಟೆ ತಾಲೂಕಿನ ಕಾಲು ಬಾಯಿ ಜ್ವರ ಕಾಣಿಸಿಕೊಂಡ 4-5 ಗ್ರಾಮಗಳ 8 ಸಾವಿರ ರಾಸುಗಳಿಗಷ್ಟೇ ಲಸಿಕೆ ನೀಡಲಾಗಿದೆ.
ಕಾಲುಬಾಯಿ ಜ್ವರ ಸಾಂಕ್ರಾಮಿಕವಾಗಿದ್ದು, ತಿಂದುಳಿದ ಮೇವನ್ನು ಬೇರೆ ಹಸುವಿಗೆ ನೀಡುವುದು, ಒಂದೇ ಬಕೆಟ್ನಲ್ಲಿ ನೀರು, ಕಲಗಚ್ಚು ನೀಡುವುದರಿಂದ ಒಂದು ಹಸಿವಿನಿಂದ ಮತ್ತೊಂದಕ್ಕೆ ಹರಡಲಿದೆ. ಹೈನುಗಾರಿಕೆ ನಂಬಿ ಬದುಕುವ ರೈತರಿಗೆ ಕೊರೊನಾ ಕಾಲದಲ್ಲಿ ಈ ರೋಗ ಗಾಯದ ಮೇಲೆ ಬರೆ ಎಳೆದಂತಾಗಿದೆ.