ಚಾಮರಾಜನಗರ :ಒಂದು ವರ್ಷದ ಬಳಿಕ ಇಂದು ಚಾಮರಾಜನಗರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಒಂದೆಡೆ, ಅಧಿಕಾರಿಗಳಿಗೆ ಸಚಿವ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರೇ, ಮತ್ತೊಂದೆಡೆ ಅಧಿಕಾರಿಗಳು ನಿದ್ರೆಗೆ ಜಾರಿದ್ದರು.
ಸಭೆಯ ಆರಂಭದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ವೇದಿಕೆ ಬಳಿ ಕರೆಯಿಸಿಕೊಂಡ ಸಚಿವ ವಿ ಸೋಮಣ್ಣ, ಎರಡು ವರ್ಷಗಳಾದರೂ ಕೆಲಸ ಪ್ರಾರಂಭಿಸಿಲ್ಲ. ಅದಕ್ಕೇ ನಿಮ್ಮನ್ನು ಸನ್ಮಾನಿಸುತ್ತಿದ್ದೇನೆ ಎಂದು ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕೂರಿಸಿ ಜಾಡಿಸಿದರು.
ನೀವು ಮಾಡುವ ಕೆಲಸದಿಂದ ಶಾಸಕರು ನಿತ್ಯ ಬೈಸಿಕೊಳ್ಳುತ್ತಿದ್ದಾರೆ. ಕಳೆದ ಕೆಡಿಪಿ ಸಭೆಯಲ್ಲಿಯೂ ಕಾಮಗಾರಿ ಆರಂಭಿಸುವುದಾಗಿ ಹೇಳಿ ಈಗ ಸುಮ್ಮನಾಗಿದ್ದೀರಿ. ಕತ್ತೆ ಕಾಯಿರಿ, ಈಡಿಯಟ್ಸ್ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಕೆಡಿಪಿ ಸಭೆಗೆ ಗೈರಾದ ಕೆ-ಶಿಪ್ ಅಧಿಕಾರಿಗೆ ಫೋನ್ ಮಾಡಿದ ಸಚಿವರು, ಸಭೆಯ ಮಾಹಿತಿ ಇದ್ದರೂ ಯಾಕೆ? ಬರಲಿಲ್ಲ ಎಂದು ಕ್ಲಾಸ್ ತೆಗೆದುಕೊಂಡರು. ಬಳಿಕ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ, ಕೆ-ಶಿಪ್ ಅಧಿಕಾರಿಗೆ ನೋಟಿಸ್ ಕೊಟ್ಟು ಸಂಜೆಯೊಳಗೆ ಅಮಾನತು ಮಾಡಬೇಕು. ಇಲ್ಲದಿದ್ದರೇ ಸದನದಲ್ಲಿ ನಾನೇ ಮಾತನಾಡಿ ಅಮಾನತು ಮಾಡಿಸುತ್ತೇನೆ ಎಂದು ಗರಂ ಆದರು.
ಬಲೆಗೆ ಸಿಲುಕಿದ ಮೀನುಗಾರಿಕಾ ಅಧಿಕಾರಿ :ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಗಿರೀಶ್ ತಮ್ಮ ಸಾಧನೆಯ ಬಗ್ಗೆ ಮಾತನಾಡುವಾಗ 10 ಬಲೆ ಹಾಗೂ 35 ಹರಿಗೋಲನ್ನು ಕೊಡಲಾಗಿದೆ ಎಂದು ಹೇಳುತ್ತಿದ್ದಂತೆ ಕುಪಿತಗೊಂಡ ಸಚಿವರು, ನಿಮ್ಮ ಇಲಾಖೆಯನ್ನು ಸಣ್ಣ ನೀರಾವರಿ ಇಲಾಖೆಯೊಟ್ಟಿಗೆ ಏಕೆ ವಿಲೀನ ಮಾಡಬಾರದು.