ಚಾಮರಾಜನಗರ: ಬಿಜೆಪಿ ಹಿರಿಯ ನಾಯಕ, ಸಚಿವ ವಿ.ಸೋಮಣ್ಣ ಇಂದು ಮುಂಜಾನೆಯಿಂದಲೇ ಚಾಮರಾಜನಗರದಲ್ಲಿ ಮತ ಪ್ರಚಾರ ನಡೆಸಿದರು. ಮಾರ್ನಿಂಗ್ ವಾಕ್‌ನಿಂದಲೇ ಅವರು ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದರು. ವಿವಿಧ ಬಡಾವಣೆಗಳು, ಟೀ ಅಂಗಡಿಗಳಿಗೆ ಭೇಟಿ ನೀಡಿ ತನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ನಂತರ, ಕಾಂಗ್ರೆಸ್ ಮುಖಂಡರು, ಉಪ್ಪಾರ ಸೇರಿದಂತೆ ವಿವಿಧ ಸಮುದಾಯ ಮುಖಂಡರ ಮನೆಗೆ ತೆರಳಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಕೋರಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಯಾರು ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, 2006 ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಒದೆ ತಿಂದಿದ್ದೇನೆ, ಬರಿಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ, ನನ್ನ ಕಾರಿನ ಗ್ಲಾಸ್ ಒಡೆದಿದ್ದರು ಪ್ಯಾಂಟ್ ಹರಿದು ಹಾಕಿದ್ದರು, ಅವತ್ತು ನನ್ನ ಸಮಾಜ ಎದುರು ಹಾಕಿಕೊಂಡು ಅವರುಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದರು.
ನಾನು ಸಾಹೇಬ್ರೇ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೇ ನನಗೂ ಅವರಿಗೂ ಇರೋ ವ್ಯತ್ಯಾಸ. ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ, ನಾನು ಅಭ್ಯರ್ಥಿ, ಅವರೂ ಅಭ್ಯರ್ಥಿ ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದರೆ ಒಳ್ಳೇದು ಎಂದು ತಿರುಗೇಟು ಕೊಟ್ಟರು.
ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿಯಾಗಿದೆ- ಬಿ.ವೈ.ವಿಜಯೇಂದ್ರ:ಹಳೇ ಮೈಸೂರು ಭಾಗದಲ್ಲಿ ಇಂದಿನಿಂದ ಪ್ರಚಾರಕ್ಕೆ ಧುಮುಕಿರುವ ಯುವನಾಯಕ ವಿಜಯೇಂದ್ರ ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಹಾಗೂ ಉಮ್ಮತ್ತೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ , ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ, ಬಿಎಸ್‌ವೈ ಅವರನ್ನು ಮೂಲೆಗುಂಪೆ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿಯಾಗಿದೆ. ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಅಂತ ಜನತೆಗೆ ಗೊತ್ತು, ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್ ಗೆ ಬಂದಿದ್ದಾರೆ ಅಂತ ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಅದನ್ನು ಯಾರೂ ಒಪ್ಪಲ್ಲ ಎಂದರು.
81ನೇ ವರ್ಷದಲ್ಲೂ ಯಡಿಯೂರಪ್ಪ ಕೆಲಸ ಮಾಡ್ತಿದಾರೆ, ಅವರ ರಟ್ಟೆ ಇನ್ನೂ ಗಟ್ಟಿಯಿದೆ, ಬಿಜೆಪಿ ಅಧಿಕಾರಕ್ಕೆ ಬರೋ ತನಕ ಸುಮ್ನೆ ಕೂರೋ ವ್ಯಕ್ತಿ ಅಲ್ಲ, ಯಡಿಯೂರಪ್ಪ ಒಂದು ಹೆಜ್ಜೆ ಮುಂದೆ ಇಟ್ಟರೆ ಅದರ ಪರಿಣಾಮ ಏನಾಗುತ್ತೆ ಅನ್ನೋದು ವಿರೋಧ ಪಕ್ಷದವರಿಗೆ ಗೊತ್ತಿದೆ, ಬಿಜೆಪಿಯ ಹಿರಿಯರು ಒಟ್ಟಾಗಿ ಕೆಲಸ ಮಾಡ್ತಿದಾರೆ ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ:ಮೋದಿ ಬ್ರಹ್ಮಾಸ್ತ್ರಗಳು ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ