ಚಾಮರಾಜನಗರ:ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕೊನೆಗೂ ವಿ. ಶ್ರೀನಿವಾಸಪ್ರಸಾದ್ ಗೆಲ್ಲುವ ಮೂಲಕ ಗಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ. ಈ ಮೂಲಕ, ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಹ್ಯಾಟ್ರಿಕ್ ಜಯದ ಕನಸು ಕನಸಾಗೇ ಉಳಿಯಿತು.
ಗಡಿ ಜಿಲ್ಲೆಯಲ್ಲಿ ಪ್ರಸಾದ್ ಪಾರುಪತ್ಯ...
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಸಂಸದ ಆರ್.ಧ್ರುವನಾರಾಯಣ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸಿ ಹ್ಯಾಟ್ರಿಕ್ ಜಯದ ವಿಶ್ವಾಸದಲ್ಲಿದ್ದರು. ಆದರೆ, ಹಿರಿಯ ರಾಜಕಾರಣಿಯಾದ ವಿ.ಶ್ರೀನಿವಾಸ್ ಪ್ರಸಾದ್ ಪಟ್ಟುಗಳು ಕಾಂಗ್ರೆಸ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.
ಗಡಿ ಜಿಲ್ಲೆಯಲ್ಲಿ ಕಮಲ ಅರಳಿಸಿದ ಹಳೇ ಹುಲಿ ಮೋದಿ ಅಲೆಯಲ್ಲಿ ಜಯದ ನಗೆ ... ವರ್ಕೌಟ್ ಆಯ್ತಾ ಬಿಎಸ್ವೈ ವರ್ಚಸ್ಸು...
ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಮೋದಿ ಅಲೆ ಕೆಲಸ ಮಾಡಿದೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಹಾಗೂ ವಿ.ಶ್ರೀನಿವಾಸಪ್ರಸಾದ್ ಮೇಲಿನ ಸಿಂಪಥಿ ವರ್ಕೌಟ್ ಆಗಿದ್ದು, ಧ್ರುವನಾರಾಯಣರನ್ನು ಸೋಲಿಸುವ ಮೂಲಕ ಪ್ರಸಾದ್ ತಮ್ಮ ಪ್ರತಿಷ್ಠೆ ಉಳಿಸಿಕೊಂಡಿದ್ದಾರೆ.
ಕಾಂಗ್ರೆಸ್ ಕೋಟೆ ಛಿದ್ರ ಛಿದ್ರ...
ಇಲ್ಲಿಯವರೆಗೂ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕೇಸರಿ ಬಾವುಟ ಹಾರಿಸಿದ್ದು, ಮೋದಿ ಸಂಪುಟದಲ್ಲಿ ಪ್ರಸಾದ್ ಸಚಿವರಾಗಲಿದ್ದಾರೆ ಎಂಬ ವಿಶ್ವಾಸ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಜೆಡಿಯು ಹಾಗೂ ಕಾಂಗ್ರೆಸ್ನಿಂದ 5 ಬಾರಿ ಆಯ್ಕೆಯಾಗಿದ್ದ ಪ್ರಸಾದ್ ಈಗ 6ನೇ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ. 1999ರಲ್ಲಿ ಅಟಲ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಪ್ರಸಾದ್ 2 ದಶಕದ ಬಳಿಕ ಮತ್ತೆ ಕೇಂದ್ರ ಸಚಿವರಾಗುವರೇ ಎಂಬುದನ್ನು ಕಾದು ನೋಡಬೇಕಿದೆ.