ಚಾಮರಾಜನಗರ: ಎಲ್ಲಾದ್ರೂ ಹೆಣ ಬಿತ್ತು ಅಂದರೆ ಯಾವ ಪಕ್ಷ ಅಂತಾರೆ. ರಾಜ್ಯದಲ್ಲಿ ಹೆಣದ ಮೇಲಿನ ರಾಜಕಾರಣ ಜೋರಾಗಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿ ಕಾರಿದ್ದಾರೆ.
ಇಲ್ಲಿನ ಸುಳ್ವಾಡಿ ವಿಷ ಪ್ರಸಾದ ದುರಂತದ ಸಂತ್ರಸ್ತರಿಗೆ ಭೂಮಿ ಹಾಗೂ ಪರಿಹಾರ ಕೊಡದಿದ್ದನ್ನು ಖಂಡಿಸಿ ಹನೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಣ ಮತ್ತು ಹೆಣಗಳ ರಾಜಕಾರಣ ವಿಜೃಂಭಿಸುತ್ತಿದೆ. ಇದರ ಲಾಭ ಪಡೆಯಲು ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಎಂದು ನುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಹೆಣ ಬಿತ್ತು ಅಂದ್ರೆ ಯಾವ ಪಕ್ಷ ಅಂಥಾರೆ, ಹೆಣದ ಮೇಲೆ ರಾಜಕಾರಣ ಜೋರಾಗುತ್ತೆ : ಉರಿಲಿಂಗಶ್ರೀ ಕಿಡಿ ಯಾವುದೋ ಭಾಗದಲ್ಲಿ ಒಬ್ಬ ವ್ಯಕ್ತಿ ಸತ್ತರೆ ಅವರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ಪರಿಹಾರ ನೀಡುತ್ತಾರೆ. ಆದರೆ, ಸುಳ್ವಾಡಿ ವಿಷ ಪ್ರಸಾದ ಸೇವನೆ ಘಟನೆ ಸಂಭವಿಸಿ 4 ವರ್ಷಗಳು ಕಳೆದರೂ ಬಾಧಿತ ಕುಟುಂಬಗಳಿಗೆ ಇನ್ನೂ ಸೂಕ್ತ ಪರಿಹಾರ ಸಿಗದಿರುವುದು ದುರದೃಷ್ಟವೇ ಸರಿ ಎಂದು ಹೇಳಿದರು.
ಅಮೃತಮಹೋತ್ಸವ ಆಚರಣೆ ದುರದೃಷ್ಟಕರ:ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ಯಾರಿಗಾಗಿ..? ಇಲ್ಲಿ ವಿಷಪ್ರಾಶನದಿಂದ ಸತ್ತ ಕುಟುಂಬಗಳು ಪರಿಹಾರಕ್ಕಾಗಿ ರಸ್ತೆಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣ ಮಾಡಿ ಅಮೃತಮಹೋತ್ಸವ ಆಚರಣೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಶೇ.42 ರಷ್ಟು ಮಂದಿ ಅಪೌಷ್ಟಿಕತೆಕತೆಯಿಂದ ಸಾಯುತ್ತಿದ್ದಾರೆ. ಹೆರಿಗೆ ವೇಳೆ ಮೃತಪಡುವರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಅಮೃತ ಮಹೋತ್ಸವವೇ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಇನ್ನು 1ತಿಂಗಳ ಒಳಗಾಗಿ ಸುಳ್ವಾಡಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನಿವೇಶನ ಹಾಗೂ ಜಮೀನು ಮಂಜೂರು ಮಾಡಿಕೊಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಲವು ಗ್ರಾಮಗಳಲ್ಲಿ ಶವಗಳನ್ನು ಹೂಳಲು ಸ್ಮಶಾನಗಳಿಲ್ಲ. ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಸ್ಮಶಾನಭೂಮಿ ಮಂಜೂರು ಮಾಡಿಕೊಡಬೇಕು. ಇಲ್ಲವಾದರೆ ನಿಮ್ಮ ಕಚೇರಿ ಮುಂಭಾಗವೇ ಶವ ಸಂಸ್ಕಾರ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಮನೆ ಮನೆ ತಿರಂಗಾ ಅಭಿಯಾನ.. ಸಿಎಂ ಸೇರಿ ಬಿಜೆಪಿ ನಾಯಕರಿಂದ ಮನೆ ಮುಂದೆ ಧ್ವಜಾರೋಹಣ