ಕರ್ನಾಟಕ

karnataka

ETV Bharat / state

ಹಾಸ್ಟೆಲ್​​ಗೆ ದಿಢೀರ್ ಭೇಟಿ ಕೊಟ್ಟು ತಿಳಿಸಾರು ಮಜ್ಜಿಗೆ ಕುಡಿದ ಉಪ ಲೋಕಾಯುಕ್ತರು - ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಉಪಲೋಕಾಯುಕ್ತ ಪಣೀಂದ್ರ ಭೇಟಿ

ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಉಪಲೋಕಾಯುಕ್ತ ಪಣೀಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ, ಹಾಸ್ಟೆಲ್​ನಲ್ಲಿ ತಿಳಿಸಾರು, ಮಜ್ಜಿಗೆ ರುಚಿ ಸವಿದರು.

ಹಾಸ್ಟೆಲ್​​ಗೆ ದಿಢೀರ್ ಭೇಟಿ ಕೊಟ್ಟು ತಿಳಿಸಾರು ಮಜ್ಜಿಗೆ ಕುಡಿದ ಉಪಲೋಕಾಯುಕ್ತರು
ಹಾಸ್ಟೆಲ್​​ಗೆ ದಿಢೀರ್ ಭೇಟಿ ಕೊಟ್ಟು ತಿಳಿಸಾರು ಮಜ್ಜಿಗೆ ಕುಡಿದ ಉಪಲೋಕಾಯುಕ್ತರು

By

Published : Aug 20, 2022, 10:51 AM IST

Updated : Aug 20, 2022, 2:33 PM IST

ಚಾಮರಾಜನಗರ:ಕರ್ನಾಟಕ ರಾಜ್ಯದ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್. ಪಣೀಂದ್ರ ನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಶುಕ್ರವಾರ ರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೃತ್ತಿಪರ ಶಿಕ್ಷಣ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು.‌

ವಿದ್ಯಾರ್ಥಿನಿಯರೊಂದಿಗೆ ಸಮಾಲೋಚಿಸಿ, ಹಾಸ್ಟಲ್‍ನಲ್ಲಿರುವ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಂಡರು. ಊಟ, ಉಪಹಾರ ಹೇಗೆ ನೀಡಲಾಗುತ್ತಿದೆ, ವಿದ್ಯುತ್, ನೀರು ಸಮರ್ಪಕವಾಗಿ ಪೂರೈಸಲಾಗುತ್ತಿದೆಯೇ, ಶೌಚಾಲಯಗಳು ಸಾಕಷ್ಟು ಸಂಖ್ಯೆಯಲ್ಲಿವೆಯೇ ಎಂಬ ಬಗ್ಗೆ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು.

ಇದೇ ವೇಳೆ, ವಿದ್ಯಾರ್ಥಿನಿಯರು 100 ಮಂದಿಗೆ 4 ಶೌಚಾಲಯ ಇರುವ ಬಗ್ಗೆ ಹಾಗೂ ಒಂದು ಕೊಠಡಿಯಲ್ಲಿ 18 ಮಂದಿ ಉಳಿದಿರುವ ಬಗ್ಗೆ ಗಮನಕ್ಕೆ ತಂದರು. ಬಳಿಕ ಇನ್ನಷ್ಟು ವಿಸ್ತಾರವಾಗಿ ಕೊಠಡಿಗಳ ಸೌಲಭ್ಯ ಹಾಗೂ ಶೌಚಾಲಯ ಒದಗಿಸುವಂತೆ ಅಧಿಕಾರಿಗಳಿಗೆ ಪಣಿಂದ್ರ ಅವರು ಸೂಚಿಸಿದರು.

ಆಗ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಉತ್ತರಿಸಿ, ವೃತ್ತಿಪರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟಲ್ ಇದ್ದು, ಶೀಘ್ರವೇ ಹಲವು ವಿದ್ಯಾರ್ಥಿನಿಯರನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ಬಳಿಕ ಉಪ ಲೋಕಾಯುಕ್ತರು ಮಾತನಾಡಿ, ಇನ್ನೂ 15 ದಿನದಿಳಗೆ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಸಮಸ್ಯೆ ಬಗೆಹರಿಸದಿದ್ದರೇ ಕರೆ ಮಾಡಿ ತಿಳಿಸುವಂತೆ ತಮ್ಮ ಮೊಬೈಲ್ ಸಂಖ್ಯೆಯನ್ನು ವಿದ್ಯಾರ್ಥಿನಿಯರಿಗೆ ಕೊಟ್ಟು ಹೋಗಿದ್ದಾರೆ.

ತಿಳಿಸಾರು-ಮಜ್ಜಿಗೆ ಕುಡಿದ ಉಪ ಲೋಕಾಯುಕ್ತರು: ಹಾಸ್ಟಲ್‍ನ ಅಡುಗೆ ಕೋಣೆಗೆ ಭೇಟಿ ನೀಡಿದ ನ್ಯಾ.ಫಣೀಂದ್ರ ಆಹಾರವನ್ನು ಪರಿಶೀಲಿಸಿ, ತಿಳಿಸಾರು ಕುಡಿದು ಪ್ರತಿದಿನ ಇದೇ ಗುಣಮಟ್ಟ ಇರುವಂತೆ ನೋಡಿಕೊಳ್ಳಿ, ವೇತನ ಸಮಸ್ಯೆ ಇದ್ದರೆ ತಿಳಿಸಿ ಎಂದು ಅಲ್ಲಿನ ಅಡುಗೆ ಸಿಬ್ಬಂದಿಗೆ ಹೇಳಿದರು. ಹಾಗೇಯೆ ಇಲ್ಲಿ ಸ್ಥಳಾವಕಾಶ ಸಮಸ್ಯೆ ಇದ್ದು, ಬೇಗನೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮೆಟಿಕ್ ಪೂರ್ವ ಬಾಲಕಿಯರ ಹಾಸ್ಟೆಲ್​​ಗೆ ಭೇಟಿ ನೀಡಿ ಗ್ರಂಥಾಲಯ, ಸ್ಟಡಿ ರೂಮ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು, ಭಾರತದ ಸಂವಿಧಾನವನ್ನು ಎಲ್ಲರೂ ಓದಬೇಕು, ಲಂಚ ಪಡೆಯದ ಅಧಿಕಾರಿಗಳಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇನ್ನು, ಅಲ್ಲಿನ ಅಡುಗೆ ಕೋಣೆಯಲ್ಲಿ ತಯಾರಿಸುತ್ತಿದ್ದ ಊಟವನ್ನು ವೀಕ್ಷಿಸಿದರು. ವಿದ್ಯಾಥಿಗಳಿಗೆ ತಯಾರಿಸಿದ್ದ ಮಜ್ಜಿಗೆ ಕುಡಿದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸದ ಬಗ್ಗೆ ಮಾಹಿತಿ ಪಡೆದು ಗರಂ ಆದ ನ್ಯಾಯಮೂರ್ತಿಗಳು, ಕೂಡಲೇ ಸ್ಯಾನಿಟರಿ ಪ್ಯಾಡ್ ವಿತರಿಸಬೇಕು, ಬರ್ನಿಂಗ್ ಮಿಷಿನ್ ಒಂದನ್ನು ತಂದಿಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ವಿದ್ಯಾರ್ಥಿನಿಯರು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಬೇಕು. ಖಂಡಿತವಾಗಿಯೂ ವಿದ್ಯಾರ್ಥಿನಿಯರ ಬಗ್ಗೆ ಕಾಳಜಿವಹಿಸುತ್ತೀರಿ ಎಂಬ ಭರವಸೆ ಇದೆ ಎಂದು ಜಿಪಂ ಸಿಇಒ ಗಾಯತ್ರಿ ಅವರನ್ನು ಉದ್ದೇಶಿಸಿ ಉಪಲೋಕಾಯುಕ್ತರು ಹೇಳಿದರು ಹಾಗೂ ಭರವಸೆ ವ್ಯಕ್ತಪಡಿಸಿದರು.

(ಇದನ್ನೂ ಓದಿ: 2 ವರ್ಷದಿಂದ ಖಾಲಿ ಇದ್ದ ಉಪಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾ. ಫಣೀಂದ್ರ ನೇಮಕ)

Last Updated : Aug 20, 2022, 2:33 PM IST

ABOUT THE AUTHOR

...view details