ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ಬಹಿಷ್ಕಾರಕ್ಕೊಳಗಾಗಿದ್ದ ಕೊಳ್ಳೇಗಾಲ ತಾಲೂಕಿನ ಉಗನೀಯ ಗ್ರಾಮದ ವ್ಯಕ್ತಿ ತನಗೆ ನ್ಯಾಯ ಸಿಕ್ಕಿಲ್ಲವೆಂದು ಮತ್ತೆ ಆರೋಪಿಸಿದ್ದಾರೆ.
ಬಗೆಹರಿಯದ ಬಹಿಷ್ಕಾರ ಪ್ರಕರಣ: ಧೈರ್ಯ ಹೇಳಬೇಕಾದ ಪೊಲೀಸರಿಂದಲೇ ಬೆದರಿಕೆ ಆರೋಪ ಬಹಿಷ್ಕೃತವಾಗಿರುವ ಕುಮಾರ್ ಈಟಿವಿ ಭಾರತದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನ್ಯಾಯ ಕೊಡಿಸಬೇಕಾದ ತಹಶೀಲ್ದಾರ್ ಹಾಗೂ ಪೊಲೀಸರು ತನಗೆ ಬೆದರಿಕೆ ಹಾಕುತ್ತಿದ್ದಾರೆ. ಕುಲದ ಮುಖಂಡರೊಂದಿಗೆ ಶಾಮೀಲಾಗಿ ಗೂಂಡಾ ಕಾಯ್ದೆ ಹಾಕುವುದಾಗಿ, ಗಡಿಪಾರು ಮಾಡುವುದಾಗಿ ಹೆದರಿಸಿದ್ದಾರೆ. ನಿನಗೆ ಜೀವ ಬೆದರಿಕೆ ಇದ್ದರೆ ಗನ್ ಮ್ಯಾನ್ ನೇಮಿಸಿಕೊ ಎಂದಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ತನಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಊರಿಗೆ ತೆರಳಲು ಜೀವ ಭಯ. ಬೇರೆ ಸಮುದಾಯದವರು ಮಾತನಾಡಿದರೂ ಕುಲದ ಯಜಮಾನರು ಅಂಕೆ ಇಡುತ್ತಿದ್ದಾರೆ. ತನ್ನ ಜಾಗದಲ್ಲಿ ಮನೆ ಕಟ್ಟಲು ಬಿಡುತ್ತಿಲ್ಲ. ಇನ್ನಾದರೂ ಡಿಸಿ ಹಾಗೂ ಎಸ್ಪಿಯವರು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ಘಟನೆ:
ಕುಮಾರ್ ತಂದೆ ನಿಂಗಯ್ಯ ಎಂಬುವರು 40 ವರ್ಷದ ಹಿಂದೆ ಸ್ವಗ್ರಾಮ ಬಿಟ್ಟು ಮಂಡ್ಯಕ್ಕೆ ತೆರಳಿ ಬದುಕು ಕಟ್ಟಿಕೊಂಡಿದ್ದರು. ಹಬ್ಬ, ಸಾವು - ನೋವುಗಳ ಸಂದರ್ಭದಲ್ಲಿ ಸ್ವಗ್ರಾಮಕ್ಕೆ ಬರುತ್ತಿದ್ದರು. ನಂತರ ನಿಂಗಯ್ಯ ಮತ್ತು ಅವರ ಪತ್ನಿ ವಯೋಸಹಜವಾಗಿ ಮರಣವನ್ನು ಹೊಂದಿದ ಬಳಿಕ ಕುಮಾರ್ ಸ್ವಗ್ರಾಮಕ್ಕೆ ಬಂದು ತಂದೆ ಕೊಂಡುಕೊಂಡಿದ್ದ ನಿವೇಶನದಲ್ಲಿ ಮನೆ ಕಟ್ಟಲು ಆರಂಭಿಸಿದ್ದಾರೆ. ಆದರೆ, ಗ್ರಾಮದ ಕೆಲವರು ಇಲ್ಲಿ ಏಕೆ ಮನೆ ಕಟ್ಟುತೀಯಾ? ನೀನು ಈ ಗ್ರಾಮದವನಲ್ಲ ಎಂದು ಅಡ್ಡಗಾಲಿಡುತ್ತಿದ್ದಾರೆ.
ನಂತರ, ಕುಮಾರ್ ಗ್ರಾಮದ ಹಿರಿಯರಿಗೆ ನಡೆದ ಘಟನೆಯನ್ನು ವಿವರಿಸಿ ಪಂಚಾಯಿತಿ ಸೇರಿಸಿದಾಗ ಮನೆ ಕಟ್ಟ ಬೇಕಾದರೆ 20 ಸಾವಿರ ರೂಗಳನ್ನ ಕುಲಕ್ಕೆ ಕೊಡಬೇಕೆಂದು ಯಜಮಾನರು ಬೇಡಿಕೆ ಇಡುತ್ತಿದ್ದಾರೆ. ಸ್ವಂತ ಜಾಗದಲ್ಲಿ ಮನೆ ಕಟ್ಟಲು ಕುಲಕ್ಕೆ ದುಡ್ಡು ಯಾಕೆ ಕೊಡಬೇಕು?, ಕುಲದಲ್ಲಿ ಇಲ್ಲಿಯವರೆಗೆ ಎಷ್ಟು ಹಣ ಇದೆ ಎಂದು ಲೆಕ್ಕ ಕೇಳಿದ್ದರಿಂದ ಬಹಿಷ್ಕಾರಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ತಹಶೀಲ್ದಾರ್ ಕುನಾಲ್, ಕೊಳ್ಳೇಗಾಲ ಸಿಪಿಐ ಶ್ರೀಕಾಂತ್, ಕೊಳ್ಳೇಗಾಲ ಗ್ರಾಮಾಂತರ ಪಿಎಸ್ಐ ಅಶೋಕ್ ಕಳೆದ ವಾರ ಗ್ರಾಮದ ಯಜಮಾನರನ್ನು ಕರೆಯಿಸಿ ಸಭೆ ಸೇರಿಸಿ ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದ್ದರು. ಆದರೆ, ಕುಮಾರ್ ಈಗ ತಹಶೀಲ್ದಾರ್ ಮತ್ತು ಪೊಲೀಸರ ವಿರುದ್ಧ ದೂರುತ್ತಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.