ಚಾಮರಾಜನಗರ:ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೇರಿದ್ದ ಲಾಕ್ಡೌನನ್ನು ಸರ್ಕಾರದ ಸೂಚನೆ ಮೇರೆಗೆ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರದಲ್ಲಿ ಎಲ್ಲಾ ಅಂಗಡಿ ತೆರೆಯಲು ಅವಕಾಶ: ಹೊಸ ಆದೇಶದಲ್ಲಿ ಸ್ವಲ್ಪ ಬದಲಾವಣೆ - ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿತ ಕಂಡ ಕಾರಣ ಚಾಮರಾಜನಗರ ಅನ್ಲಾಕ್ ಮಾಡಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಹವಾನಿಯಂತ್ರಿತ ಅಂಗಡಿ, ಮಾಲ್, ಜಿಮ್ ಹಾಗೂ ಸಲೂನ್ ಹೊರತುಪಡಿಸಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಡಿಸಿ ಆದೇಶದಂತೆ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಹವಾನಿಯಂತ್ರಿತ ಅಂಗಡಿ, ಮಾಲ್, ಜಿಮ್ ಹಾಗೂ ಸಲೂನ್ ಹೊರತುಪಡಿಸಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟನ್ನು ನಡೆಸಬಹುದಾಗಿದೆ. ಆದರೆ, ಈ ಹಿಂದೆ ಬೆಳಗ್ಗೆ 6 ರಿಂದ 2 ರವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಲಾಗಿತ್ತು. ನೂತನ ಆದೇಶದಲ್ಲಿ ಒಂದು ತಾಸು ಕಡಿತಗೊಂಡಿದ್ದು ಮಧ್ಯಾಹ್ನ 1 ರ ತನಕ ಮಾತ್ರ ಅಂಗಡಿ ತೆರೆಯಲು ಅವಕಾಶವಿದೆ.
ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಷ್ಟೆ ಅವಕಾಶ ನೀಡಲಾಗಿದೆ. ದೇವಸ್ಥಾನಕ್ಕೆ ಸಾರ್ವಜನಿಕರ ಮುಕ್ತ ಪ್ರವೇಶವನ್ನು ನಿರಾಕರಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆಯ ಆದೇಶ ಕೈಸೇರುವ ಮುನ್ನವೇ ಮಂಗಳವಾರ ನಗರದ ಅಲ್ಲಲ್ಲಿ ಬುಕ್ ಸ್ಟೇಷನರೀಸ್, ಬಟ್ಟೆ ಅಂಗಡಿಗಳು, ಚಪ್ಪಲಿ, ಜೆರಾಕ್ಸ್, ಮೊಬೈಲ್ ಶಾಪ್, ಎಲೆಕ್ಟ್ರಾನಿಕ್ ಮಳಿಗೆ, ಗ್ಯಾರೇಜ್‌ಗಳು ಬಾಗಿಲು ತೆರೆದು ವಹಿವಾಟು ನಡೆಸಿದ್ದು ಕಂಡು ಬಂತು.