ಚಾಮರಾಜನಗರ: ಜಿಲ್ಲೆಯಲ್ಲಿ ದೊಡ್ಡ ಗಣಪತಿ ಎಂದೇ ಕರೆಯಲ್ಪಡುವ ನಗರದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಲ್ಪಡುವ ಗಣಪತಿ ಈ ಬಾರಿ ಕಾಶಿ ವಿಶ್ವನಾಥನ ಸಂರಕ್ಷಕನ ರೂಪ ತಾಳಿದ್ದಾನೆ.
ಈಗಾಗಲೇ ಚಾಮರಾಜನಗರದ ರಾಮಸಮುದ್ರದಲ್ಲಿ ಮೂರ್ತಿ ತಯಾರಿಕೆ ಪೂರ್ಣಗೊಂಡಿದ್ದು, ಲಿಂಗದ ಮುಂಭಾಗ ಖಡ್ಗ, ತ್ರಿಶೂಲಧಾರಿಯಾಗಿ ವಿರಾಜಮಾನನಾಗಿದ್ದು ಕಾಶಿ ವಿಶ್ವನಾಥ ಸಂರಕ್ಷಣಾ' ಗಣಪತಿ ಎಂದು ಹೆಸರಿಡಲಾಗಿದೆ.
ಹಿಂದೂಪರ ಸಂಘಟನೆಗಳ ವಿದ್ಯಾ ಗಣಪತಿ ಮಂಡಲಿಯು ಕಳೆದ 60 ವರ್ಷಗಳಿಂದ ಪ್ರತಿಷ್ಠಾಪಿಸುತ್ತಿರುವ ಈ ಗಣಪತಿ ನಾಡಿನ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾಗಿದೆ.
ನಿಮಜ್ಜನದ ವೇಳೆ ಅನ್ಯ ಕೋಮಿನ ಪ್ರಾರ್ಥನಾ ಮಂದಿರದ ಎದುರು ಹಾದುಹೋಗುವ ವಿಚಾರದಲ್ಲಿ ವಿವಾದವೆದ್ದು ಸುಪ್ರೀಂ ಕೋರ್ಟ್ ನಲ್ಲಿ ಈ ಗಣಪತಿ ಪ್ರಕರಣ ಇತ್ಯರ್ಥವಾಗಿದೆ. ಗಣಪನ ಉತ್ಸವಕ್ಕೆ ಅವಕಾಶ ಕಲ್ಪಿಸಬೇಕೆಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿರುವುದು ಈ ಗಣಪನ ಹೆಗ್ಗಳಿಕೆಯಾಗಿದೆ. ನಿಮಜ್ಜನ ದಿನದಂದು ಪೊಲೀಸ್ ವರಿಷ್ಠಾಧಿಕಾರಿ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಿದ್ದು, ಕಲಾತಂಡಗಳು, ಮೆರವಣಿಗೆಯಲ್ಲಿನ ಜನರಿಗಿಂತ ಖಾಕಿ ಪಡೆ ಹೆಚ್ಚಿರುವುದರಿಂದ ಪೊಲೀಸ್ ಗಣಪ ಎಂದೇ ಪ್ರಸಿದ್ಧ.
ವೀರ ಸಾವರ್ಕರ್ ವೇದಿಕೆಯಲ್ಲಿ ಬಾರಿ ಕಾಶಿ ವಿಶ್ವನಾಥ ರಕ್ಷಕ ಗಣಪ ವೇದಿಕೆಗೆ ಸಾವರ್ಕರ್ ಹೆಸರು:ವಿದ್ಯಾ ಗಣಪತಿ ಮಂಡಲಿಯ ಸಾಂಸ್ಕೃತಿಕ ವೇದಿಕೆಗೆ ಈ ಬಾರಿ 'ವೀರ್ ಸಾವರ್ಕರ್' ಹೆಸರನ್ನಿಡಲಾಗಿದೆ. ಸ್ವಾತಂತ್ರ್ಯ ಹೋರಾಟಗರಾರರ ಹೆಸರನ್ನೇ ಹಿಂದಿನಿಂದಲೂ ಸಾಂಸ್ಕೃತಿಕ ವೇದಿಕೆಗೆ ಇಡುತ್ತಿದ್ದು, ಈ ಬಾರಿ ಸಾವರ್ಕರ್ ಅವರ ಹೆಸರನ್ನಿಡಲಾಗಿದೆ ಎಂದು ಈ ಸಾಲಿನ ಗಣಪತಿ ಮಂಡಲಿ ಅಧ್ಯಕ್ಷ, ಬಿಜೆಪಿ ಮುಖಂಡ ಮನೋಜ್ ಪಟೇಲ್ ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಭಾವಚಿತ್ರವುಳ್ಳ ಕೇಸರಿ ಧ್ವಜ ಬಳಸಲು ನಿರ್ಧಾರ