ಕರ್ನಾಟಕ

karnataka

ETV Bharat / state

ಲವ್ ಮಾಡದಿದ್ದರೆ ಕೊಲೆ ಮಾಡ್ತೇನಿ ಎಂದಿದ್ದ ಇಬ್ಬರಿಗೆ ಪಾಠ ಕಲಿಸಿದ ಚಾಮರಾಜನಗರ ಜಡ್ಜ್: 22 ದಿನ ಜೈಲೂಟ - ಇಬ್ಬರು ಯುವಕರಿಗೆ 22 ದಿನ ಜೈಲು ಶಿಕ್ಷೆ

ಲವ್ ಮಾಡು ಎಂದು ಲೈಂಗಿಕವಾಗಿ ಪೀಡಿಸಿ ಕೊಲೆ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 22 ದಿನ ಜೈಲು ಶಿಕ್ಷೆ ವಿಧಿಸಿದ್ದಾರೆ.

ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

By

Published : Jan 29, 2022, 1:30 PM IST

ಚಾಮರಾಜನಗರ: ಲವ್ ಮಾಡದಿದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ ಇಬ್ಬರು ಯುವಕರಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬಿ.ಎಸ್.ಭಾರತಿ ಪಾಠ ಹೇಳಿ, 22 ದಿನ ಜೈಲು ಶಿಕ್ಷೆ ವಿಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದ ಚೇತನ್(23) ಹಾಗೂ ಗುರುಪ್ರಸಾದ್(25) ಎಂಬವರು ಶಿಕ್ಷೆಗೊಳಗಾದವರು. 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಚೇತನ್ ಪ್ರೀತಿಸು ಎಂದು ಪೀಡಿಸುತ್ತಿದ್ದನ್ನಲ್ಲದೇ ಹಿಂಬಾಲಿಸಿ ಚುಡಾಯಿಸುತ್ತಿದ್ದ. ಇವನ ಕಾರ್ಯಕ್ಕೆ ಸ್ನೇಹಿತ ಗುರುಪ್ರಸಾದ್ ಸಾಥ್ ಕೊಡುತ್ತಿದ್ದ.

ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಇದೇ ರೀತಿ 2019 ರ ಮೇ 8 ರಂದು ಬಾಲಕಿ, ಅಜ್ಜಿ ಮನೆಗೆ ತೆರಳಿದ್ದ ವೇಳೆ ಆಕೆಗೆ ಇವರಿಬ್ಬರು ಫೋನ್​ ಮಾಡಿ ಆಸ್ಪತ್ರೆ ಬಳಿ ಈಗ ಬರದಿದ್ದರೆ, ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅಂಜಿ ಬಾಲಕಿ ತೆರಳಿದ್ದ ವೇಳೆ, ಆಕೆಗೆ ಚೇತನ್ ಲೈಂಗಿಕವಾಗಿ ಪೀಡಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕೃತ್ಯಕ್ಕೆ ಗುರುಪ್ರಸಾದ್ ಸಾಥ್ ಕೊಟ್ಟಿದ್ದ. ಈ ಸಂಬಂಧ ಬಾಲಕಿ ಪಾಲಕರು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ದೂರು ನೀಡಿದ್ದರು.

ವಾದ - ಪ್ರತಿವಾದ ಆಲಿಸಿದ ಚಾಮರಾಜನಗರ ನ್ಯಾಯಾಧೀಶರು, ಚುಡಾಯಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮುಂದೆ ಈ ರೀತಿ ಕೃತ್ಯ ಎಸಗಬಾರದು, ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕೆಂದು ಎಚ್ಚರಿಕೆ ಕೊಟ್ಟು 22 ದಿನಗಳ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ, ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details