ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವನ್ಯಜೀವಿ ವಲಯದಲ್ಲಿ ಭಾನುವಾರ ಮಧ್ಯಾಹ್ನ ಮೂರು ಹುಲಿ ಮರಿ ಕಂಡು ಬಂದಿದ್ದು, ಅದರಲ್ಲಿ ಒಂದು ಸ್ಥಳದಲ್ಲಿಯೇ ಮೃತಪಟ್ಟಿದೆ. ಮತ್ತೊಂದು ಚಿಕಿತ್ಸೆಗೆ ಸ್ಪಂದಿಸದೇ ಮೈಸೂರು ಮೃಗಾಲಯದಲ್ಲಿ ಮೃತಪಟ್ಟಿದೆ.
ಎರಡು ಮರಿಗಳು ಶೋಚನೀಯ ಸ್ಥಿತಿಯಲ್ಲಿ ಇರುವುದನ್ನು ಸಿಬ್ಬಂದಿ ಗಮನಿಸಿ ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಮರಿಗಳ ಆರೈಕೆ ಮತ್ತು ಚಿಕಿತ್ಸೆಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕಳುಹಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಹೆಣ್ಣು ಮರಿ ಸಹ ಮೃತಪಟ್ಟಿದೆ. ಬದುಕುಳಿದ ಗಂಡು ಹುಲಿ ಮರಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಸಹಾಯಕ ವಲಯಾರಣ್ಯಾಧಿಕಾರಿ ಕೆ.ಪರಮೇಶ್ ತಿಳಿಸಿದ್ದಾರೆ.