ಕೊಳ್ಳೇಗಾಲ: ನಡುರಾತ್ರಿ ಶ್ರೀಗಂಧದ ಮರ ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಗ್ರಾಮದ ಅರ್ಜುನ್ (23), ಶಿವು ( 23) ಬಂಧಿತ ಆರೋಪಿಗಳು. ರಾಮನಗರ ಜಿಲ್ಲೆ ಚನ್ನಪಟ್ಟಣದ ಕಾರ್ಲಹಳ್ಳಿ ಗ್ರಾಮದ ನವೀನ್ ಕುಮಾರ್ ಪೊಲೀಸ್ ದಾಳಿ ವೇಳೆ ಪರಾರಿಯಾದ ಆರೋಪಿ.
ನಿನ್ನೆ ಮಧ್ಯರಾತ್ರಿ 1.30ರ ಸುಮಾರಿಗೆ ಅರಣ್ಯ ಇಲಾಖೆ ಕಚೇರಿ ಸಮೀಪವಿರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹದ ಆವರಣದಲ್ಲಿದ್ದ ಶ್ರೀಗಂಧದ ಮರ ಕತ್ತರಿಸಲು ಯತ್ನಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರ್ಎಫ್ಓ ಪ್ರವೀಣ್ ರಾಮಪ್ಪ ಚಲವಾದಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ ಒಂದು ಬೈಕ್, ಕೊಡಲಿ, ಗರಗಸ ಮತ್ತು ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.