ಚಾಮರಾಜನಗರ:ತಮ್ಮಿಚ್ಛೆಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಹುಮ್ಮಸಿನಲ್ಲಿ ಲಕ್ಷ-ಲಕ್ಷ ಹಣ ಹಿಡಿದು ಬಾಜಿಗೆ ಆಹ್ವಾನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಹಣ ಹಿಡಿದು ಪಂಥಕ್ಕೆ ಆಹ್ವಾನಿಸಿದ ಕೊಳ್ಳೇಗಾಲ ತಾಲೂಕು ಬಸ್ತಿಪುರ ಗ್ರಾಮದ ಮಲ್ಲೇಶ್ ಹಾಗೂ ಬಾಜಿ ವಿಡಿಯೋ ಮಾಡಿದ್ದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ ತರಕಾರಿ ವ್ಯಾಪಾರಿಯಾಗಿದ್ದು, 8 ಲಕ್ಷ ರೂ. ಹಣದ ಕಂತೆ ಮುಂದೆ ಪಂಥಕ್ಕೆ ಆಹ್ವಾನಿಸಿದ್ದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಮೂರು ಲಕ್ಷ, ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ 3 ಲಕ್ಷ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ ಪರವಾಗಿ 2 ಲಕ್ಷ ಹಣ ಕಟ್ಟುತ್ತೇನೆ. ಬನ್ನಿ ಬಾಜಿ ಕಟ್ಟಿ ಎಂದು ಮಲ್ಲೇಶ್ ಆಹ್ವಾನಿಸಿದ್ದರು. ಚುನಾವಣಾ ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಜೂಜಾಟಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ನೀಡಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಭ್ಯರ್ಥಿ ಗೆಲುವಿನ ಬಗ್ಗೆ 1 ಕೋಟಿ ಬೆಟ್ :ಬಿಜೆಪಿ ಶಾಸಕ ನಿರಂಜನಕುಮಾರ್ ಗೆಲ್ಲುಲಿದ್ದಾರೆ. ಹೀಗಾಗಿ ತಾನು 1 ಕೋಟಿ ಬೆಟ್ ಕಟ್ಟುತ್ತೇನೆಂದು ಬಾಜಿಗೆ ಆಹ್ವಾನಿಸಿದ ಗುಂಡ್ಲುಪೇಟೆ ಪುರಸಭಾ ಸದಸ್ಯನ ಮನೆ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ನಿರಂಜನ್ ಪರ ಬೆಟ್ಟಿಂಗ್ಗೆ ಒಂದು ಕೋಟಿಗೆ ಆಹ್ವಾನ ನೀಡಿದ್ದ ಪುರಸಭೆ ಸದಸ್ಯ ಕಿರಣ್ ಗೌಡ ಮನೆ ಮೇಲೆ ಗುಂಡ್ಲುಪೇಟೆ ಪಟ್ಟಣ ಠಾಣಾ ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ.