ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ರಕ್ಷಿತಾರಣ್ಯ ಬೇಡವೇ ಬೇಡ ಎಂದು ರಾಜಕಾರಣಿಗಳು ಅಪಸ್ವರ ಎತ್ತುತ್ತಿದ್ದಾರೆ.
ಹೌದು.. ಚಾಮರಾಜನಗರ ಜಿಲ್ಲೆಯಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮಗಳಿದ್ದು, ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಅರಣ್ಯ ಇಲಾಖೆಯ ಪ್ರಸ್ತಾಪಕ್ಕೆ ಎನ್ಟಿಸಿಎ ಕೂಡ ಅನುಮೋದನೆ ನೀಡಿದ್ದು, ಮುಖ್ಯಮಂತ್ರಿ ಬಳಿ ಈಗ ಕಡತ ಬಂದು ಕುಳಿತಿದೆ. ವನ್ಯಜೀವಿಧಾಮದಲ್ಲಿ 15ಕ್ಕೂ ಹೆಚ್ಚು ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ಮಲೆಮಹದೇಶ್ವರ ವನ್ಯಜೀವಿಧಾಮವು ಬಿಆರ್ಟಿ, ಸತ್ಯಮಂಗಲಂ ಹಾಗೂ ಬರಗೂರು ಮೀಸಲು ಅರಣ್ಯದೊಟ್ಟಿಗಿನ ಸಂಪರ್ಕ ಸೇತುವಾಗಿದ್ದು, ಅರಣ್ಯ ಸಂರಕ್ಷಣೆ ಹಾಗೂ ಹುಲಿ ಸಂತತಿ ಉಳಿಸಲು ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ರಕ್ಷಿತಾರಣ್ಯವಾಗಿ ಘೋಷಸಿಬೇಕೆಂದು ಪರಿಸರವಾದಿಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದಾರೆ.
ಈ ಸಂಬಂಧ ಈಗಾಗಲೇ ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ, ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಸೇರಿದಂತೆ ಹಲವರು ಟೈಗರ್ ರಿಸರ್ವ್ ಮಾಡುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ. ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಕೆಲವು ದಿನಗಳ ಹಿಂದೆಯಷ್ಟೇ ಕಾವೇರಿ ಕೊಳ್ಳದ ಮೀಸಲು ಅರಣ್ಯವನ್ನು ಕಾವೇರಿ ವನ್ಯಧಾಮ ಎಂದು ಘೋಷಿಸಿದ್ದು, ಸ್ಟಾಲಿನ್ ಅವರ ಪರಿಸರಪ್ರೇಮವನ್ನು ಬೊಮ್ಮಾಯಿ ಕೂಡ ತೋರಬೇಕೆಂದು ಹೂವರ್ ಒತ್ತಾಯಿಸಿದ್ದಾರೆ.