ಚಾಮರಾಜನಗರ: ಲಾಕ್ಡೌನ್ ಸಮಯದಲ್ಲಿ ಕೇವಲ ಸಿನಿಮಾ, ಆಟದ ಕಡೆ ಒಲವನ್ನು ಹರಿಸುವ ಮಕ್ಕಳ ನಡುವೆ ಜಿಲ್ಲೆಯಲ್ಲಿನ ಚಿಣ್ಣರು ಉತ್ತಮ ಜೀವನ ಶೈಲಿಗೆ ಉಪಯುಕ್ತವಾದ ಯೋಗಾಸನಗಳನ್ನು ಕಲಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಲಾಕ್ಡೌನ್ ಸಮಯದ ಸದುಪಯೋಗ: ಚಾಮರಾಜನಗರದ ಚಿಣ್ಣರಿಂದ ಕಠಿಣ ಯೋಗಾಭ್ಯಾಸ - Tough yoga practised by Chinnarajanagara childrens
ಸಂತೋಷದಿಂದಲೇ ಬೆಳಗ್ಗೆ ಮತ್ತು ಸಂಜೆ ಯೋಗಾಭ್ಯಾಸ ಮಾಡುತ್ತಿದ್ದೇವೆ. ಯೋಗ ಮಾಡಲು ಮುಂಜಾನೆ ಬೇಗ ಏಳುವುದು ರೂಢಿಯಾಗಿದೆ. ನೃತ್ಯ ಮಾಡಲು ಆಸನಗಳು ಸಹಾಯಕವಾಗಿವೆ ಎಂದು ಚಾಮರಾಜನಗರದ ಚಿಣ್ಣರು ಮತ್ತು ಯೋಗ ಶಿಕ್ಷಕಿಯರು ಈಟಿವಿ ಭಾರತದೊಂದಿಗೆ ಯೋಗದ ಅನುಕೂಲತೆ ಕುರಿತು ಮಾತನಾಡಿದ್ದಾರೆ.
ನಗರದ ಕಲಾ ಸರಸ್ವತಿ ನಾಟ್ಯ ಸಂಸ್ಥೆಯ 50 ಕ್ಕೂ ಹೆಚ್ಚು ನೃತ್ಯ ವಿದ್ಯಾರ್ಥಿಗಳು ಲಾಕ್ಡೌನ್ ವೇಳೆ ಸರಳ ಯೋಗಾಸನಗಳನ್ನು ಕಲಿಯುವ ಮೂಲಕ ಇದೀಗ ನಿರಂತರ ಪ್ರಯತ್ನದ ಫಲವಾಗಿ ಕಠಿಣ ಆಸನಗಳನ್ನೂ ಕಲಿತಿದ್ದಾರೆ. ನೃತ್ಯ ಮಾಡಲು ದೇಹ ಬಳಕುವಂತೆ ಮಾಡಲು-ಆಲಸ್ಯ ತೊಲಗಿಸಿ ಅಧ್ಯಯನ ಮಾಡಲು ಈ ಮಕ್ಕಳು ಯೋಗದ ದಾರಿ ಕಂಡುಕೊಂಡಿದ್ದಾರೆ.
ಈ ಕುರಿತು, ವೃತ್ತಿಯಲ್ಲಿ ವೈದ್ಯೆಯಾಗಿರುವ ನೃತ್ಯ ಪಟು, ಯೋಗಶಿಕ್ಷಕಿ ಡಾ. ಉಮಾರಾಣಿ ಈಟಿವಿ ಭಾರತದೊಂದಿಗೆ ಮಾತನಾಡಿ, ಲಾಕ್ಡೌನ್ನಲ್ಲಿ ಸೀಮಿತ ಚಿಣ್ಣರಿಗೆ ಮಾತ್ರ ಯೋಗ ಕಲಿಸಿದ್ದು, ಇದರಿಂದಾಗಿ ಮಕ್ಕಳು ಉತ್ಸಾಹದಿಂದ ಕಲಿತಿದ್ದಾರೆ. ಇದು ಅವರ ಆರೋಗ್ಯಕ್ಕೆ, ಓದಿಗೆ ಮುಖ್ಯವಾಗಿ ಭರತನಾಟ್ಯಕ್ಕೆ ಸಹಕಾರಿಯಾಗಿದೆ. ಪ್ರಾಣಿ- ಪಕ್ಷಿಗಳ ಹೆಸರುಗಳ ಮೂಲಕ ಆಸನಗಳನ್ನು ಅಭ್ಯಾಸ ಮಾಡಿಸಿದ್ದೇವೆ. ಈಗ ಯೋಗಾಸನವನ್ನು ಮಕ್ಕಳು ಗಂಭೀರವಾಗಿ ತೆಗೆದುಕೊಂಡು ಸಂತಸದಿಂದಲೇ ಕಲಿಯುತ್ತಿದ್ದಾರೆ ಎಂದರು.
ನಾಲ್ಕು ವರ್ಷದ ಪ್ರಾಚಿ ಜೈನ್ ಎಂಬ ಪುಟಾಣಿಗೂ ಈ ವೇಳೆ ಯೋಗ ಕಲಿಸಲು ಆರಂಭಿಸಿದ್ದು, ಈ ಮಗು ಕೂಡ ಹಲವು ಆಸನಗಳನ್ನು ಪ್ರದರ್ಶಿಸುತ್ತಿದೆ. ಪುಟ್ಟ ವಯಸ್ಸಿನಲ್ಲಿಯೇ ಯೋಗ ಹೇಳಿಕೊಡುವುದರಿಂದ ಉತ್ತಮ ಜೀವನಶೈಲಿಯನ್ನು ಬೆಳೆಸಿದಂತಾಗುತ್ತದೆ. ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ನಮ್ಮ ದೇಹಕ್ಕೊಂದು ಶಕ್ತಿ ಎನ್ನುತ್ತಾರೆ ನೃತ್ಯ ಶಾಲೆಯ ಪ್ರಾಂಶುಪಾಲೆ ಡಾ. ಅಕ್ಷತಾ ಜೈನ್.