ಕರ್ನಾಟಕ

karnataka

ETV Bharat / state

ಡಿಸಿಎಫ್ ಪಿ.ಶ್ರೀನಿವಾಸ್ ಜನ್ಮದಿನ... ಕಾಡುಗಳ್ಳನ ಊರಲ್ಲಿ ಇವರೇ ದೇವರು! - dcf p Shrinivas birthday

ದಂತಚೋರನ ಊರಲ್ಲಿ ಡಿಸಿಎಫ್ ಪಿ.ಶ್ರೀನಿವಾಸ್​​ ಅವರೇ ದೇವರು. ಇವರು ಅಂದು ಕಾರ್ಯನಿರ್ವಹಿಸಿದ್ದ ರೀತಿ ಇಂದಿಗೂ ಅರಣ್ಯ ಇಲಾಖೆಗೆ ಸ್ಫೂರ್ತಿ. ಅಪ್ಪಟ ಗಾಂಧಿವಾದಿಯಾಗಿ ನರಹಂತಕನ‌ ಬದುಕನ್ನು ಬದಲಿಸ ಹೊರಟವರು ಹುಟ್ಟಿ ಇಂದಿಗೆ ಬರೋಬ್ಬರಿ 66 ವರ್ಷ.

Today DCF p. Shrinivas Birthday
ಡಿಸಿಎಫ್ ಪಿ. ಶ್ರೀನಿವಾಸ್ ಜನ್ಮದಿನ...ಕಾಡುಗಳ್ಳನ ಊರಲ್ಲಿ ಇವರೇ ದೇವರು

By

Published : Sep 12, 2020, 8:12 AM IST

ಚಾಮರಾಜನಗರ: ಡಿಸಿಎಫ್ ಪಿ.ಶ್ರೀನಿವಾಸ್ ಅವರನ್ನು ಕಾಡುಗಳ್ಳ ಕೊಂದು 29 ವರ್ಷ ಗತಿಸಿದರೂ ಇಂದಿಗೂ ಹನೂರು ತಾಲೂಕಿನ‌ ಗೋಪಿನಾಥಂನಲ್ಲಿ ಅವರ ಹೆಸರು ಅವಿಸ್ಮರಣೀಯ. ಇಂದಿಗೂ ಗ್ರಾಮದ ಮಾರಿಯಮ್ಮ ದೇಗುಲದಲ್ಲಿ ಶ್ರೀನಿವಾಸ್​ ಅವರ ಭಾವಚಿತ್ರವಿಟ್ಟು ಪೂಜಿಸುತ್ತಾರೆ. ಪ್ರತೀ ವರ್ಷ ನಡೆಯುವ ಹಬ್ಬದಲ್ಲಿ ಇವರ ಭಾವಚಿತ್ರ ಇರುವ ಆಹ್ವಾನ ಪತ್ರಿಕೆಗಳೇ ಮನೆ-ಮನೆ ಸೇರಲಿವೆ ಎನ್ನುವುದು ಅಚ್ಚರಿಯಾದರೂ ಸತ್ಯ.

ಸೆ. 12ರ 1954ರಂದು ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ರಾಜಮಂಡ್ರಿಯಲ್ಲಿ ಜನಿಸಿದ ಶ್ರೀನಿವಾಸ ಅಪ್ಪಟ ಗಾಂಧಿವಾದಿ. ಜೊತೆಗೆ ವಿನೋಬಾ ಭಾವೆ ಅವರಿಂದ ಪ್ರಭಾವಿತರಾದ ವ್ಯಕ್ತಿ. ಇದೇ ಗಾಂಧಿಗಿರಿಯಿಂದ ವೀರಪ್ಪನ್​ನನ್ನು ಬದಲಾಯಿಸಿ ಮುಖ್ಯವಾಹಿನಿಗೆ ಕರೆ ತರುತ್ತೇನೆಂಬ ನಂಬಿಕೆಯೇ ಅವರನ್ನು ಬಲಿ ಪಡೆಯಿತು ಎಂಬುದು ದುರಂತ.

1980ರಲ್ಲಿ ಬೆಂಗಳೂರು ಸಾರ್ಕ್ ಸಮ್ಮೇಳನ ನಡೆಯುವ ವೇಳೆ ವೀರಪ್ಪನ್​​ನನ್ನು ಬಂಧಿಸಿದ್ದ ಪೊಲೀಸರು, ಅರಣ್ಯಾಧಿಕಾರಿಯಾಗಿದ್ದ ಶ್ರೀನಿವಾಸ್​ಗೆ ಒಪ್ಪಿಸಿದ್ದರು. ಬಂಧಿತ ವೀರಪ್ಪನ್​​ನನ್ನು ಚಾಮರಾಜನಗರದ ಬೂದಿಪಡಗ ಗೆಸ್ಟ್ ಹೌಸ್​ನಲ್ಲಿ 3 ದಿನ ವಿಚಾರಣೆಗಿಡಲಾಗಿತ್ತು. ಶ್ರೀನಿವಾಸನ್ ರೌಂಡ್ಸ್​​ಗೆ ಹೋದ ವೇಳೆ ಗೆಸ್ಟ್ ಹೌಸ್​ನಿಂದ ಪರಾರಿಯಾದ ವೀರಪ್ಪನ್ ಇನ್ನೆಂದೂ ಪೊಲೀಸರಿಗಾಗಲಿ-ಅರಣ್ಯಾಧಿಕಾರಿಗಳಿಗಾಗಲಿ ಜೀವಂತವಾಗಿ ಸಿಗಲಿಲ್ಲ.

ಡಿಸಿಎಫ್ ಪಿ. ಶ್ರೀನಿವಾಸ್ ಜನ್ಮದಿನ

ಸಂಚಿನಿಂದ ಕೊಲೆ:ಶರಣಾಗುತ್ತೇನೆಂದು ಸಂಚು ಮಾಡಿ ಡಿಸಿಎಫ್ ಶ್ರೀನಿವಾಸನ್ ಅವರನ್ನು 1991 ನವೆಂಬರ್ 10ರಂದು ಗೋಪಿನಾಥಂನಿಂದ ಅನತಿ ದೂರದ ನಲ್ಲೂರು ಬಳಿ ತಲೆ ಕತ್ತರಿಸಿ ಬರ್ಬರವಾಗಿ ಕೊಂದು ಹಾಕಲಾಗಿತ್ತು. ಅವರು ಮಡಿದ ಸ್ಥಳವೀಗ ಅರಣ್ಯ ಇಲಾಖೆಯ ಪಾಲಿಗೆ ಪುಣ್ಯಭೂಮಿಯಾಗಿದೆ. ಅವರ ಜನ್ಮದಿನಕ್ಕೂ ಒಂದು ದಿನ ಮುನ್ನ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದಂದು ಯರಕೆಯಂ ಹಳ್ಳದಲ್ಲಿ ಶ್ರೀನಿವಾಸ್ ಅವರ ನೂತನ ಸ್ಮಾರಕ ಉದ್ಘಾಟನೆಯಾಗಿದೆ.

ಈ ಕುರಿತು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ವೀರಪ್ಪನ್ ಕುಂತಂತ್ರಕ್ಕೆ ಬಲಿಯಾದ ಪಿ. ಶ್ರೀನಿವಾಸ್‍ ಅವರು ವ್ಯಕ್ತಿಯಲ್ಲ, ಅವರೊಂದು ಶಕ್ತಿಯಾಗಿದ್ದರು. ಅಧಿಕಾರಿಯಾಗಿದ್ದು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದ ಅವರು ತ್ಯಾಗ ಬಲಿದಾನದಿಂದ ಇತಿಹಾಸ ಸೃಷ್ಟಿಸಿದ್ದಾರೆ. ಅರಣ್ಯ ಇಲಾಖೆ ಪಾಲಿಗೆ ಯರಕೇಯಂ ಹಳ್ಳ ಪುಣ್ಯ ಕ್ಷೇತ್ರವಾಗಿದೆ. ಆ ಸ್ಥಳಕ್ಕೆ ತೆರಳಿದ ಪ್ರತಿಯೊಬ್ಬರಿಗೂ ಮನೋಸ್ಥೈರ್ಯ ಹೆಚ್ಚಲಿದೆ ಎಂದರು.

ಗ್ರಾಮದ ಯಜಮಾನ ಭೂಪಾಲ್ ಗೌಂಡರ್ ಪ್ರತಿಕ್ರಿಯಿಸಿ, ಅಪ್ಪಟ ಗಾಂಧಿವಾದಿಯಾಗಿದ್ದ ಸಾಹೇಬರು ತಮಗೆ ಮನೆಗಳನ್ನು ಕಟ್ಟಿಸಿಕೊಟ್ಟರು, ಮಾರಿಯಮ್ಮ ದೇಗುಲ ನಿರ್ಮಿಸಿ ಕೊಟ್ಟಿದ್ದಾರೆ. ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದು, ಗ್ರಾಮದ ದೇವಾಲಯದಲ್ಲಿ ಸಾಹೇಬರಿಗೆ ಪ್ರಥಮ ಪೂಜೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಡಿನ ದಾರಿಗೆ, ಗೋಪಿನಾಥಂ ಮಿಸ್ಟ್ರಿ ಕ್ಯಾಂಪಿನ ಸಭಾಂಗಣಕ್ಕೆ ಅವರ ಹೆಸರಿನ್ನಿಡಲಾಗಿದೆ. ಗೋಪಿನಾಥಂನಲ್ಲಿ ವೀರಪ್ಪನ್ ನೆನಪು ಅಳಿದರೂ ಡಿಸಿಎಫ್ ಶ್ರೀನಿವಾಸನ್ ಅವರ ಹೆಸರು ಮಾತ್ರ ಶಾಶ್ವತ.

ABOUT THE AUTHOR

...view details