ಕರ್ನಾಟಕ

karnataka

ETV Bharat / state

ಬಂಡೀಪುರ ಕಾಡಿನಲ್ಲೂ, ಅಂಚೆ ಕಾರ್ಡಿನಲ್ಲೂ ಹುಲಿ 'ಮುದ್ರೆ'! - ಬಂಡೀಪುರ ಅಂಚೆ ಕಚೇರಿ'

ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳಿರುವ ಅರಣ್ಯವೂ ಹೌದು. ಬಂಡೀಪುರ ಅಂಚೆ ಕಚೇರಿಯಲ್ಲಿ ಬಳಸುವ ಪ್ರತಿ ಕಾರ್ಡ್‌ನಲ್ಲೂ ಹುಲಿ 'ಮುದ್ರೆ'ಯನ್ನು ನೋಡಬಹುದಾಗಿದೆ.

ಪ್ರತಿ ಅಂಚೆ ಕಾರ್ಡ್‌, ಸರ್ಕಾರಿ ದಾಖಲೆ ಪತ್ರಗಳಲ್ಲೂ ಇದೆ ಹುಲಿ 'ಮುದ್ರೆ'

By

Published : Jul 29, 2019, 7:22 PM IST

ಚಾಮರಾಜನಗರ:ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳಿರುವ ಅರಣ್ಯವೂ ಹೌದು. ಇಲ್ಲಿ ಹುಲಿಗಳನ್ನ ಬರೀ ಕಾಡಿನಲ್ಲಷ್ಟೇ ಅಲ್ಲ, ಪ್ರತಿ ಅಂಚೆ ಕಾರ್ಡ್‌ನಲ್ಲೂ, ಸರ್ಕಾರಿ ದಾಖಲೆ ಪತ್ರಗಳಲ್ಲೂ ನೋಡೋಕೆ ಸಾಧ್ಯ. ವ್ಯಾಘ್ರನೇ ಇಲ್ಲಿನ ಅಂಚೆ ಕಚೇರಿಯ ಕೇಂದ್ರಬಿಂದು.

ಬಂಡೀಪುರ ಅಂಚೆ ಕಚೇರಿ.. ಇಲ್ಲಿ ಬಳಸುವ ಠಸ್ಸೆಯಲ್ಲಿ ಹುಲಿಯೇ ಕೇಂದ್ರಬಿಂದು. ಐತಿಹಾಸಿಕ ಪ್ರದೇಶಗಳು, ವಿಶೇಷ ಸ್ಥಳಗಳಿಗೆ ಕೊಡಮಾಡುವ ಅಂಚೆ ಮುದ್ರೆ ಬಂಡೀಪುರದಲ್ಲಿ 80ರ ದಶಕದಿಂದಲೂ ಜಾರಿಯಲ್ಲಿದೆ. ಭಾರತೀಯ ಅಂಚೆ ಇಲಾಖೆಯು ವಿಶೇಷ ಸ್ಥಳಗಳಿಗೆ ವಿಶೇಷ ಮುದ್ರೆಗಳನ್ನು ನೀಡಿದೆ. ಉದಾಹರಣೆಗೆ ಶ್ರವಣಬೆಳಗೊಳದ ಅಂಚೆ ಕಚೇರಿಗೆ ಹೋದರೆ ಅಲ್ಲಿ ಗೊಮ್ಮಟನ ಮುದ್ರೆ ಕಾಣ ಸಿಗುತ್ತೆ. ಹಾಗೇ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ. ಅದಕ್ಕಾಗಿ ಇಲ್ಲಿ ಹುಲಿಯೇ ಕೇಂದ್ರಬಿಂದುವಾಗಿದೆ. ಇಲ್ಲಿನ ಅಂಚೆ ಕಚೇರಿಯಲ್ಲಿ ಹುಲಿ ಠಸ್ಸೆ ಬಳಸಲಾಗುತ್ತಿದೆ. 1982-1992ರವರೆಗೆ ಘರ್ಜಿಸುತ್ತಿರುವ ಹುಲಿ ಮುಖ ಮುದ್ರೆಗೆ ಬಳಸಲಾಗಿತ್ತು. ಆದರೆ, 1992-2018ರವರೆಗೆ ಹುಲಿ ಹೆಜ್ಜೆಗುರುತಿನ ಮುದ್ರೆ ಬಳಕೆಯಾಗ್ತಿದೆ. ಈಗ ಅಂದ್ರೆ 2019ರಿಂದ ಮತ್ತೆ ಹುಲಿ ಮುಖವನ್ನೇ ಮುದ್ರೆಯನ್ನಾಗಿ ಬಳಸಲಾಗುತ್ತಿದೆ ಅಂತಾರೆ ಅಂಚೆ ಇಲಾಖೆ ಹಿರಿಯ ಅಧಿಕಾರಿ ಸಂದೇಶ್.

ಪ್ರತಿ ಅಂಚೆ ಕಾರ್ಡ್‌, ಸರ್ಕಾರಿ ದಾಖಲೆ ಪತ್ರಗಳಲ್ಲೂ ಇದೆ ಹುಲಿ 'ಮುದ್ರೆ'

ಪೋಸ್ಟ್ ಕಾರ್ಡ್​ಗಳಿಗಂತೂ ಸಿಕ್ಕಾಪಟ್ಟೆ ಬೇಡಿಕೆ:

ಈ ಮುದ್ರೆ ನೋಡಿದೊಡನೆಯೇ ಇದು ಬಂಡೀಪುರ ಅಂತಾ ಯಾರಾದರೂ ಗುರುತಿಸುತ್ತಾರೆ. ಪಿಕ್ಟೋರಿಯಲ್ ಕ್ಯಾನ್ಸಲೇಶನ್​​ಗೆ (ವಿಶೇಷ ಅಂಚೆಮುದ್ರೆ) ಬೇಡಿಕೆ ಇದೆಯಂತೆ. ಪೋಸ್ಟ್ ಕಾರ್ಡ್​ಗಳಿಗೆ ಹುಲಿ ಹೆಜ್ಜೆ ಗುರುತುಗಳ ಮುದ್ರೆ ಹಾಕಿಸಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸ್ಥಳೀಯರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಪಗ್ ಮಾರ್ಕ್ ಕಾರ್ಡ್​ಗಳನ್ನು ಪಡೆಯುತ್ತಾರೆ‌. ಈಗ ಹುಲಿ ಮುಖದ ಮುದ್ರೆ ಬಳಸುತ್ತಿದ್ದು, ಹುಲಿ ಹೆಜ್ಜೆಗುರುತಿನ ಕಾರ್ಡ್‌ಗಳು ಸಿಗುವುದಿಲ್ಲ. ಕಳೆದ ಬಾರಿಯ ಹುಲಿ ಸಂರಕ್ಷಣಾ ದಿನದಂದು ಬಂಡೀಪುರದಲ್ಲೇ ವಿಶೇಷ ಅಂಚೆ ಲಕೋಟೆ ಬಿಡುಗಡೆಯಾಗಿತ್ತು. ತೀರಾ ಅಪರೂಪದ ಅಂಚೆ ಲಕೋಟೆ ಅದಾಗಿತ್ತು ಅಂತಾರೆ ಬಂಡೀಪುರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಶ್ ಪ್ರಸಾದ್.

ಪ್ರತಿಯೊಂದು ಸ್ಥಳಕ್ಕೂ ತನ್ನದೇಯಾದ ಮಹತ್ವವಿರುತ್ತೆ. ಐತಿಹಾಸಿಕ, ಸಾಹಿತ್ಯ, ಕಲೆ-ಸಂಸ್ಕೃತಿ, ಪರಿಸರದಿಂದಾಗಿ ಒಂದಲ್ಲಾ ಒಂದು ವಿಶೇಷತೆಗಳನ್ನ ಆಯಾ ಪ್ರದೇಶಗಳು ಹೊಂದಿರುತ್ತವೆ. ಈ ವಿಶೇಷತೆಯನ್ನೇ ಅಂಚೆ ಮುದ್ರೆಯಲ್ಲಿ ಬಳಸ್ತಿರುವುದರಿಂದ ಸ್ಥಳದ ಮಹಿಮೆ ಜತೆಗೆ ಹುಲಿಯ ಸಂರಕ್ಷಣೆ ಬಗೆಗೂ ಅರಿವು ಮೂಡಿಸಿದಂತಾಗುತ್ತೆ.

ABOUT THE AUTHOR

...view details