ಚಾಮರಾಜನಗರ/ಮೈಸೂರು:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಳ್ಳ ಗಸ್ತಿನಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿದೆ.
ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ನಡೆಸುವಾಗ ಹುಲಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಹುಲಿಗೆ ಅಂದಾಜು 8 ರಿಂದ 9 ವರ್ಷ ವಯಸ್ಸಾಗಿದ್ದು ಸ್ವಾಭಾವಿಕವಾಗಿ ಮೃತಪಟ್ಟಿರುವುದು ಖಚಿತವಾಗಿದೆ.
ಹುಲಿಯ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಮೃತ ಹೆಣ್ಣು ಹುಲಿಯ ಎಲ್ಲ ಉಗುರುಗಳು, ಹಲ್ಲುಗಳು ಹಾಗೂ ಇತರ ಅಂಗಾಗಳು ಸುರಕ್ಷಿತವಾಗಿದ್ದು, ಕಾಮಾಲೆ ರೋಗ ಮತ್ತು ಗುದದ್ವಾರ ಸಂಬಂಧಿ ಖಾಯಿಲೆಯಿಂದ ಬಳಲಿ ಹುಲಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ, ಹುಲಿ ಶರೀರವನ್ನು ಎನ್ಟಿಸಿಎ ಮಾರ್ಗಸೂಚಿ ಪ್ರಕಾರ ಸುಡಲಾಗಿದೆ.
ಆನೆಚೌಕೂರಿನಲ್ಲಿ ಹುಲಿ ಮೃತದೇಹ ಪತ್ತೆ:ನಾಗರಾಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರಿನ ವ್ಯಾಪ್ತಿಯ ಆನೆಚೌಕೂರಿನಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮೃತದೇಹ ಪರಿಶೀಲನೆ ನಡೆಸಿದರು. 6-7ವರ್ಷದ ಗಂಡು ಹುಲಿಯಾಗಿದ್ದು, ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದಿದ್ದಾರೆ.
(ಇದನ್ನೂ ಓದಿ: ಐಟಿ ರಿಟರ್ನ್ಸ್, ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮರೆಯದಿರಿ)