ಚಾಮರಾಜನಗರ: ಅರಕಲವಾಡಿ ಸುತ್ತಮುತ್ತ ಮತ್ತೆ ಹೆಣ್ಣು ಹುಲಿ ಮರಿಗಳೊಂದಿಗೆ ಪ್ರತ್ಯಕ್ಷವಾಗಿ ರೈತರ ದೀಪಾವಳಿಯ ಸಂಭ್ರಮವನ್ನು ಕಸಿದಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅರಕಲವಾಡಿ ಸುತ್ತಮತ್ತ ಮತ್ತೇ ಹೆಣ್ಣುಲಿ ಪ್ರತ್ಯಕ್ಷ ಅರಕಲವಾಡಿ, ನರಸಮಂಗಲ, ಚೌಡಹಳ್ಳಿ ಎಲ್ಲೆ ಹಾಗೂ ಲಿಂಗಣಪುರ ಗ್ರಾಮಗಳಲ್ಲಿ ಹುಲಿಯ ಓಡಾಟ ಕಂಡ ರೈತರು ಜಮೀನಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಕಾಡುಹಂದಿಗಳು ಜೋಳವನ್ನು ನಾಶಪಡಿಸುತ್ತಿದ್ದರೂ ರೈತರು ಏನೂ ಮಾಡಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ.
ಈ ಕುರಿತು ಲಿಂಗಣಪುರದ ಪ್ರಕಾಶ್ ಪ್ರತಿಕ್ರಿಯಿಸಿ, ಕಳೆದ ಎರಡು ದಿನಗಳಿಂದ ಚೌಡಹಳ್ಳಿ ಎಲ್ಲೆಯಲ್ಲಿನ ಮಹೇಶ್ ಎಂಬುವರ ಜಮೀನಿನಲ್ಲಿ ಹುಲಿ ಓಡಾಡುತ್ತಿದೆ. ದನಗಾಹಿಗಳು ನೋಡಿ ಕಿರುಚಾಡಿ ಓಡಿಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಖಾಲಿ ಬೋನಿಟ್ಟು ಹುಲಿ ಸೆರೆ ಎಂಬ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹುಲಿ ಓಡಾಡಿಕೊಂಡಿರುವುದು ದೃಢಪಟ್ಟರೂ, ಎರಡು ದಿನ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸುಮ್ಮನಾಗಿದೆ. ದೀಪಾವಳಿ ಸಂಭ್ರಮವೂ ಇಲ್ಲಾ, ಬೆಳೆ ರಕ್ಷಣೆಯನ್ನೂ ಮಾಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.