ಚಾಮರಾಜನಗರ :ಹುಲಿ ಸುಸ್ಥಿರ ಪರಿಸರ, ಸಮೃದ್ಧಿಯ ಸಂಕೇತ. ಹುಲಿ ಇದ್ದರೇ ಕಾಡು ಚೆನ್ನಾಗಿದೆ ಎಂದರ್ಥ. ಎರಡು ಹುಲಿ ಸಂರಕ್ಷಿತ ಪ್ರದೇಶಗಳು, ಎರಡು ವನ್ಯಜೀವಿ ಧಾಮಗಳಲ್ಲಿ ಹುಲಿ ಗಣತಿ, ಆನೆ, ಕಾಡೆಮ್ಮೆ ಗಣತಿ ಪರ್ವ ಆರಂಭವಾಗಿದೆ. ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಈ ಪ್ರಾಣಿಗಳ ಲೆಕ್ಕ ಹಾಕಲು ರೆಡಿಯಾಗಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರದಿಂದ ಹುಲಿ ಗಣತಿ ಆರಂಭವಾಗಿದೆ. 300 ಸಿಬ್ಬಂದಿ ಭಾಗಿಯಾಗಿದ್ದಾರೆ. ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನವರಿ 27ರಿಂದ, ಮಲೆಮಹದೇಶ್ವರ ವನ್ಯಜೀವಿ ಧಾಮ ಹಾಗೂ ಕಾವೇರಿ ವನ್ಯಜೀವಿ ಧಾಮಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ಹುಲಿ ಗಣತಿ ಕಾರ್ಯ ನಡೆಯಲಿದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಯುತ್ತೆ. 2018ರ ಹುಲಿ ಗಣತಿ ಪ್ರಕಾರ, ಬಂಡೀಪುರದಲ್ಲಿ 173 ಹುಲಿಗಳಿವೆ. ಬಿಆರ್‌ಟಿಯಲ್ಲಿ 52ರಿಂದ 80ರವರೆಗೂ ಹುಲಿಗಳಿವೆ ಎಂದು ವರದಿ ಹೇಳಿದೆ. ಈ ಬಾರಿ ಆ್ಯಪ್ ಮೂಲಕ ಗಣತಿ ಕಾರ್ಯ ನಡೆಯುತ್ತಿದ್ದು, ಹುಲಿಯೊಟ್ಟಿಗೆ ಆನೆ ಮತ್ತು ಕಾಡೆಮ್ಮೆಯನ್ನೂ ಸಿಬ್ಬಂದಿ ಲೆಕ್ಕ ಹಾಕಲಿದ್ದಾರೆ.