ಚಾಮರಾಜನಗರ: ಮಧ್ಯಾಹ್ನದವರೆಗೂ ದಟ್ಟ ಮಂಜು ತಂಪು ತಂಪು ವಾತಾವರಣವಷ್ಟೇ ಅಲ್ಲದೇ ಗೋಪಾಲಸ್ವಾಮಿ ಬೆಟ್ಟದಲ್ಲಿ ಇತ್ತೀಚೆಗೆ ಹುಲಿರಾಯ ಕೂಡ ಪ್ರವಾಸಿಗರಿಗೆ ಆಗಾಗ ದರ್ಶನ ನೀಡುತ್ತಿದ್ದಾನೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಎರಡು ಹುಲಿಗಳು ಆಗಾಗ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಬೆಟ್ಟದ ಹುಲಿ ಅಂತಲೇ ಕರೆಸಿಕೊಳ್ಳುತ್ತಿವೆ.
ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ: ಪ್ರವಾಸಿಗರಿಗೆ ಬೆಟ್ಟದ ಹುಲಿಗಳ ದರ್ಶನ! ಈ ಕುರಿತು ಗೋಪಾಲಸ್ವಾಮಿ ಸನ್ನಿಧಿಯ ಸಹಾಯಕ ಅರ್ಚಕರಾದ ವಾಸು ಮಾತನಾಡಿ, ಹುಲಿಯೊಂದು ರಸ್ತೆಗೆ ಬರುತ್ತಿದೆ. ನಮಗೆ ವಾರಕ್ಕೆ ಮೂರು-ನಾಲ್ಕು ಬಾರಿ ಕಾಣಿಸಲಿದ್ದು ಕಟ್ಟೆ ಮೇಲೆ ಕುಳಿತಿರುತ್ತದೆ. ಕೆಲವೊಂದು ಬಾರಿ ರಸ್ತೆ ಮಧ್ಯೆಯೇ ಆಟ ಆಡುತ್ತಿರುತ್ತದೆ. ಆನೆ, ಹುಲಿ, ಕಾಡೆಮ್ಮೆಗಳು ಬಸ್ನಲ್ಲಿ ಬರುವ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿವೆ ಎಂದರು.
ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಬೆಟ್ಟದಲ್ಲಿ ಒಂದು ಹೆಣ್ಣು, ಒಂದು ಗಂಡು ಹುಲಿಯಿದೆ. ಖಾಸಗಿ ವಾಹನಗಳ ಸಂಚಾರ ನಿರ್ಬಂಧ, ಲಾಕ್ಡೌನ್ನಲ್ಲಿ ದೇಗುಲ ಬಂದ್ ಆಗಿದ್ದರ ಪರಿಣಾಮ ಹುಲಿರಾಯ ರಸ್ತೆಗೆ ಬರುವುದು ಅಭ್ಯಾಸವಾಗಿ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಬರುವ ಪ್ರವಾಸಿಗರಿಗೆ ಉತ್ತಮ ವಾತಾವರಣದ ಜೊತೆಗೆ ಹುಲಿ ಕಾಣಿಸಿಕೊಳ್ಳುವ ಮೂಲಕ ಡಬಲ್ ಧಮಾಕಾ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಿಂದೆ ಸಿಹಿ ಪ್ರಸಾದ ತಿನ್ನಲು ಬರುತ್ತಿದ್ದ ಆನೆಯೊಂದು ಗಮನ ಸೆಳೆದಿತ್ತು. ಈಗ ಬೆಟ್ಟದ ಹುಲಿ ಪ್ರವಾಸಿಗರ ಆಕರ್ಷಣೆಯಾಗಿದೆ.