ಚಾಮರಾಜನಗರ: ಒಂದು ಮನೆಯಲ್ಲಿ ಒಬ್ಬರೇ ಸರ್ಕಾರಿ ನೌಕರಿ ಅದರಲ್ಲೂ ಅಧಿಕಾರಿ ಮಟ್ಟದ ಕೆಲಸ ಹಿಡಿಯುವುದು ಕಷ್ಟವಾಗಿರುವ ಈ ಹೊತ್ತಿನಲ್ಲಿ ಸತತ ಓದು, ಪರಿಶ್ರಮದ ಪರಿಣಾಮ ಒಂದೇ ಕುಟುಂಬದ ಮೂವರು ಸಬ್ ಇನ್ಸ್ಪೆಕ್ಟರ್ ಆಗಿರುವ ಯಶೋಗಾಥೆ ಗುಂಡ್ಲುಪೇಟೆ ತಾಲೂಕಿನ ಮಾದಲವಾಡಿ ಗ್ರಾಮದಲ್ಲಿ ನಡೆದಿದೆ.
ಮಾದಲವಾಡಿ ಗ್ರಾಮದ ಚಂದ್ರು ಹಾಗೂ ಶಾಂತಮ್ಮ ಎಂಬ ದಂಪತಿಯ ಮಕ್ಕಳಾದ ರವಿಕುಮಾರ್, ಸುಗುಣ ಹಾಗೂ ಪ್ರಭು ಎಂಬ ಅಣ್ಣ-ತಮ್ಮ, ತಂಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾಗಿದ್ದು ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.
ರವಿಕುಮಾರ್ ಎಂಎ ಓದಿನ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದರಿಂದ ಎಂಎ ಮುಗಿದ ತಕ್ಷಣವೇ 2014-15ರಲ್ಲಿ ಸಿಪಿಸಿಯಾಗಿ ಮೈಸೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತತ್ತಿದ್ದರು. 2018-19 ನೇ ಸಾಲಿನಲ್ಲಿ ರಿಸರ್ವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದ ರವಿಕುಮಾರ್ ಪ್ರಸ್ತುತ ಹಾವೇರಿ ಜಿಲ್ಲೆಯ ಶಿಗ್ಗಾವ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಕುಷ್ಟಗಿಯಲ್ಲಿ ನಾಲ್ವರು ಪಿಎಸ್ಐ ಆಗಿ ನೇಮಕ.. ಅಣ್ತಮ್ಮ ಇಬ್ಬರಿಗೂ ಒಲಿದ ಅದೃಷ್ಟ..
ಪ್ರಭು ಅವರು ಬಿಕಾಂ ಪದವಿ ಮುಗಿಸುತ್ತಲೇ 22ನೇ ವಯಸ್ಸಿಗೆ ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿ ಪ್ರಸ್ತುತ ಕಲಬುರ್ಗಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಮೈಸೂರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಈಗ ಸುಗುಣಾ ಎಂಬವರು ತಮ್ಮ ಅಣ್ಣ ಹಾಗೂ ತಮ್ಮನಿಂದ ಒಂದಷ್ಟು ಮಾರ್ಗದರ್ಶನ ಪಡೆದು 2020-21ನೇ ಸಾಲಿನ ಪಿಎಸ್ಐ ಪರೀಕ್ಷೆಯಲ್ಲಿ 94ನೇ ರ‍್ಯಾಂಕ್ ಪಡೆದು ಬೆಂಗಳೂರಿಗೆ ಆಯ್ಕೆಯಾಗಿದ್ದಾರೆ.
ಸದಾಕಾಲ ಓದುವುದರ ಜತೆಗೆ ಸತತವಾಗಿ ಪ್ರಯತ್ನ ಪಡುತ್ತಿರಬೇಕು. ಪದವಿ ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪ್ರಯತ್ನ ಮಾಡಿದರೆ ಉತ್ತಮ. ಏಕೆಂದರೆ ಪದವಿ ಮುಗಿದ ತಕ್ಷಣ ಕೆಲಸ ತೆಗದುಕೊಳ್ಳಲೇಬೇಕು ಎಂಬ ಒತ್ತಡ ಬರುವುದರಿಂದ ಪದವಿ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಕಷ್ಟಕರವಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತಹ ಸಮೂಹವು ಯಾವುದೇ ಒತ್ತಡಕ್ಕೆ ಒಳಗಾಗದೇ, ತಮ್ಮ ಛಲವನ್ನು ಬಿಡದೇ ಪರೀಕ್ಷೆಗಳನ್ನು ಎದುರಿಸಬೇಕು. ಅಲ್ಲದೇ, ಸಮಸ್ಯೆಗಳು ಸಾವಿರಾರು ಬರಬಹುದು ಅದಕ್ಕೆ ತಲೆಕೆಡಿಸಿಕೊಳ್ಳದೇ, ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮ ಪಟ್ಟು ಓದಿದರೆ ಖಂಡಿತವಾಗಿಯೂ ಕೆಲಸ ತೆಗದುಕೊಳ್ಳಬಹುದು ಎನ್ನುತ್ತಾರೆ ಈ ಮೂವರು ಪಿಎಸ್ಐಗಳು.