ಚಾಮರಾಜನಗರ: 2023ರ ವರ್ಷ ಗಡಿ ಜಿಲ್ಲೆಯಲ್ಲಿ ರಾಜಕೀಯ ಪಲ್ಲಟಗಳು, ಪ್ರಧಾನಿ ಭೇಟಿ, ಹುಲಿ, ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ಮೊದಲ ಸ್ಥಾನ ಪಡೆದಿರುವುದು ಸೇರಿದಂತೆ ಹಲವು ಮಹತ್ವದ ಸಂಗತಿಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ.
ಪ್ರಧಾನಿ ಮೋದಿ ಸಫಾರಿ: ಭಾರತದ ಜನಪ್ರಿಯ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ನಡೆಸುವ ಮೂಲಕ ಬಂಡೀಪುರಕ್ಕೆ ಹೊಸ ಮೆರುಗನ್ನು ತಂದುಕೊಟ್ಟರು. ಏ.9 ರಂದು ವಿಶೇಷ ಹೆಲಿಕಾಪ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ, ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್ ಧರಿಸಿ ಮಿಂಚಿದ್ದರು. ಒಂದೂವರೆ ತಾಸು ಬಂಡೀಪುರ ಕಾಡಲ್ಲಿ ಸಫಾರಿ ನಡೆಸಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದರು.
ಕಾಂಗ್ರೆಸ್ ಜಯಭೇರಿ:ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ಪೈಕಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದರೇ ಹನೂರಿನಲ್ಲಿ ಜೆಡಿಎಸ್ನ ಎಂ.ಆರ್. ಮಂಜುನಾಥ್ ಗೆದ್ದು ಬೀಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್ ಪ್ರಸಾದ್, ಹನೂರಿನಲ್ಲಿ ಮಂಜುನಾಥ್ ಮೊದಲ ಬಾರಿ ಶಾಸಕರಾದರೇ, ಚಾಮರಾಜನಗರದಲ್ಲಿ ಬಿಜೆಪಿ ಪ್ರಬಲ ನಾಯಕ ಸೋಮಣ್ಣ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ಸಿ. ಪುಟ್ಟರಂಗಶೆಟ್ಟಿ ಸತತ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಕೊಳ್ಳೇಗಾಲ ಕ್ಷೇತ್ರದಿಂದ ಎ.ಆರ್. ಕೃಷ್ಣಮೂರ್ತಿ 19 ವರ್ಷದ ಬಳಿಕ ಶಾಸಕರಾದರು.
ಅಮಿತ್ ಶಾ, ರಾಗಾ, ನಡ್ಡಾ, ಪ್ರಿಯಾಂಕಾ ಪ್ರಚಾರದ ರಂಗು:2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ರಂಗು ಜೋರಾಗಿತ್ತು. ಚುನಾವಣೆ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಮಲೆ ಮಹದೇಶ್ವರ ಬೆಟ್ಟದಿಂದ ಚಾಲನೆ ಕೊಟ್ಟರು. ಇನ್ನು, ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ, ನಟ ಸುದೀಪ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜಿಲ್ಲೆಗೆ ಭೇಟಿ ಕೊಟ್ಟು ಅಬ್ಬರದ ಪ್ರಚಾರ ನಡೆಸಿದ್ದರು.
ಮಾಜಿ ಸಂಸದ ಧ್ರುವನಾರಾಯಣ ನಿಧನ:ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದತ್ತ ಹೊರಳಿದ್ದ ಆರ್. ಧ್ರುವನಾರಾಯಣ ಅಕಾಲಿಕವಾಗಿ ನಿಧನ ಹೊಂದಿದರು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದ ಹೊತ್ತಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಓರ್ವ ಉತ್ತಮ ಸಂಘಟನಾ ಚತುರನನ್ನು ಕಳೆದುಕೊಂಡಿತು. ಸದ್ಯ, ಧ್ರುವನಾರಾಯಣ ಪುತ್ರ ದರ್ಶನ್ ಜನರ ಒತ್ತಾಯಕ್ಕೆ ಮಣಿದು ನಂಜನಗೂಡಿನಲ್ಲಿ ಸ್ಪರ್ಧೆ ಮಾಡಿ ಶಾಸಕರಾಗಿದ್ದಾರೆ.