ಕರ್ನಾಟಕ

karnataka

ETV Bharat / state

ಪ್ರತಿ ವರ್ಷವೂ ಈ ಗ್ರಾಮಗಳಿಗೆ ನೆರೆಯ ಬರೆ: ಯಾವಾಗ ಶಾಶ್ವತ ಪರಿಹಾರ?

ಕಳೆದ ವರ್ಷ ಕೆ‌‌ ಆರ್ ಎಸ್ ಮತ್ತು ಕಬಿನಿ ಅಣೆಕಟ್ಟಿನಿಂದ ನೀರನ್ನು‌ ಹೊರಗೆ ಬಿಟ್ಟಿದ್ದರಿಂದ ಜಿಲ್ಲೆಯ ನದಿಯಂಚಿನ ಗ್ರಾಮಗಳು ಜಾಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದ್ದನ್ನು ಮರೆಯುವಂತಿಲ್ಲ. ಈಗಲಾದರೂ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸರ್ಕಾರಕ್ಕೆ ಜನರು ಒತ್ತಾಯಿಸಿದ್ದಾರೆ.

By

Published : Aug 7, 2020, 11:04 AM IST

ಪ್ರತಿ ವರ್ಷವೂ ಈ ಗ್ರಾಮಗಳಿಗೆ ನೆರೆಯ ಬರೆ
ಪ್ರತಿ ವರ್ಷವೂ ಈ ಗ್ರಾಮಗಳಿಗೆ ನೆರೆಯ ಬರೆ

ಕೊಳ್ಳೇಗಾಲ(ಚಾಮರಾಜನಗರ): ಒಂದೆಡೆ ಕೊರೊನಾ ಕಂಟಕವಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹ ಭೀತಿ ಕೊಳ್ಳೇಗಾಲ ನದಿ ಪಾತ್ರದಲ್ಲಿ ವಾಸವಿರುವ ಗ್ರಾಮದ ಜನರಿಗೆ ಎದುರಾಗಿದೆ.

ಕಳೆದ ವರ್ಷ 2019 ಆಗಸ್ಟ್ ತಿಂಗಳಿನಲ್ಲಿ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಹಳೇ ಅಣಗಳ್ಳಿ, ಹಂಪಾಪುರ, ಮುಳ್ಳೂರು, ಸತ್ತೇಗಾಲ ಗ್ರಾಮಗಳಲ್ಲಿ ಪ್ರವಾಹ ಬಂದೆರಗಿ ನದಿಯ ನೀರು ಇಲ್ಲಿನ ಗ್ರಾಮಗಳ ಬದುಕನ್ನು ನೆಲಕಚ್ಚಿಸಿತ್ತು. ಬೆಳೆದ ಬೆಳೆ ಕೈ ಸೇರುವ ಸಮಯದಲ್ಲಿ ನೀರುಪಾಲಾಯಿತು. ಆಸ್ತಿ -ಪಾಸ್ತಿಗೂ ಹಾನಿಯಾಗಿ ಜನರಿಗೆ ಆರ್ಥಿಕ ತೊಂದರೆಯಾಯಿತು.

ಆದರೆ ಇದೀಗ ಪ್ರವಾಹ ಬಂದು ವರ್ಷ ತುಂಬುವಷ್ಟರಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಕಾಡುತ್ತಿದೆ. ಒಂದು ಕಡೆ ಕೊರೊನಾ ಜನಜೀವನಕ್ಕೆ ತಣ್ಣೀರು ಎರಚಿದ್ರೆ, ಮುಂಗಾರು ಮತ್ತೊಂದು ಪ್ರವಾಹ ಭೀತಿಯನ್ನು ಹುಟ್ಟುಹಾಕಿದೆ.

ಪ್ರತಿ ವರ್ಷವೂ ಈ ಗ್ರಾಮಗಳಿಗೆ ನೆರೆಯ ಬರೆ

ಪ್ರತಿ ವರ್ಷವೂ ಇದೇ ಗೋಳು:

2019 ರ ಆಗಸ್ಟ್ 10ರಂದು ನೆರೆ ಆರಂಭಗೊಂಡು ಹತ್ತಾರು ದಿನಗಳ ಕಾಲ ಜನರು ಗ್ರಾಮ ತೊರೆಯುವಂತಹ ಪರಿಸ್ಥಿತಿ ಎದುರಾಗಿತ್ತು. ಜಿಲ್ಲಾಡಳಿತ ನೆರೆ ಪರಿಹಾರ ಕೇಂದ್ರಗಳನ್ನು‌ ತೆರೆದು ಆಹಾರ, ವಸತಿ ವ್ಯವಸ್ಥೆ ಮಾಡಿತು. ನಂತರ ಗ್ರಾಮಕ್ಕೆ ಅವರನ್ನು ತಲುಪಿಸಿ ವಾಸಕ್ಕೆ ಅವಕಾಶ ಮಾಡಲಾಯಿತು. ಇದೀಗ ಇಲ್ಲಿನ ಜನರಲ್ಲಿ ಮತ್ತೆ ಪ್ರವಾಹ ಆತಂಕ ಮೂಡಿದೆ. ನದಿಯ ಹರಿವು ಹೆಚ್ಚಾಗಿರುವುದು ಗ್ರಾಮಸ್ಥರಲ್ಲಿ ಭೀತಿ‌ ಹುಟ್ಟುಹಾಕಿದೆ. ಹಿಂದಿನ ವರ್ಷವೇ ಗ್ರಾಮದ ಜನರು ತಡೆಗೋಡೆ ನಿರ್ಮಾಣಕ್ಕೆ ಒತ್ತಾಯಿಸಿದ್ರೂ‌ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಇಲ್ಲಿನ ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಲೂಕಿನ ಕಾವೇರಿ ನದಿ ಪಾತ್ರದ 4 ಗ್ರಾಮ ಪಂಚಾಯಿತಿ ಪೈಕಿ ಸತ್ತೇಗಾಲ ಮತ್ತು ಧನಗೆರೆ ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳಿಗೆ ಹಾನಿಯಾಗಿರಲಿಲ್ಲ. ಬೆಳೆ ನಷ್ಟ ಹೆಚ್ಚಿನ ರೀತಿ ಸಂಭವಿಸಿತ್ತು. ಮುಳ್ಳೂರು ಗ್ರಾಮ ಪಂಚಾಯಿತಿ ಪೈಕಿ 9 ಮನೆಗಳು ಸಂಪೂರ್ಣ ಹಾಳಾಗಿದ್ದವು. ಇದರಲ್ಲಿ 6 ಮನೆಗಳು ಲಿಂಟಲ್ ಮಟ್ಟಕ್ಕೆ ಮನೆ ನಿರ್ಮಿಸಿದ್ದು, ಇವರಿಗೆ ಎರಡು ಕಂತುಗಳಲ್ಲಿ 2 ಲಕ್ಷ ಮಾತ್ರ ಬಂದಿದೆ. ಉಳಿದಂತೆ ಬರಬೇಕಾದ 3 ಲಕ್ಷ ಅನುದಾನ ನೀಡಿಲ್ಲವೆಂದು ಜನರು ಆರೋಪಿಸಿದ್ದಾರೆ.

ಹರಳೆ ಗ್ರಾಮ ಪಂಚಾಯಿತಿ ಸೇರಿದ ಹಳೇ ಅಣಗಳ್ಳಿ, ದಾಸನಪುರ, ಹಳೇ ಹಂಪಾಪುರ ದಾಸನ ಪುರ‌ ಗ್ರಾಮಗಳಲ್ಲಿ 32 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, ಮರು ನಿರ್ಮಾಣ ಮಾಡಿಕೊಳ್ಳಲು ಸರ್ಕಾರ 5 ಲಕ್ಷ ರೂ. ಗಳನ್ನು ಘೋಷಿಸಿದೆ. ಆದರೆ ಈವರೆಗೆ ಎರಡು‌ ಕಂತಿಗಳಲ್ಲಿ 2 ಲಕ್ಷ ನೀಡಿದ್ದು. ಉಳಿದ ಹಣ ಬಾರದೆ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ.

ಚರಂಡಿ, ರಸ್ತೆ ನಿರ್ಮಾಣವಾಗಿಲ್ಲ: ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು‌ ವರ್ಷ ಕಳಿದಿದೆ. ನೆರೆಹಾನಿಯಿಂದಾಗಿ ಕೊಳ್ಳೇಗಾಲ- ದಾಸನಪುರ ಸಂಪರ್ಕ ರಸ್ತೆ ಕಾಮಗಾರಿ ಆಮೇಗತಿಯಲ್ಲಿ ಸಾಗಿದ್ದು, ಸದ್ಯ ಮೆಟ್ಲು ಜೆಲ್ಲಿ ಕಲ್ಲುಗಳನ್ನು ಹಾಕಲಾಗಿದೆಯೇ ಹೊರತು ಡಾಂಬರು ಕಾಣದೇ ನಿಂತಿದೆ.

ಒಟ್ಟಾರೆ‌ 'ಮಳೆ ಬಿದ್ದಾಗ ಮಾತ್ರ ಮನೆ ಮೇಲೆ ಜ್ಞಾನ' ಎಂಬ ಗಾದೆ ಮಾತಿನಂತೆ ಸರ್ಕಾರ ಮತ್ತು ಆಡಳಿತ ವರ್ಗ ನಡೆದುಕೊಳ್ಳುತ್ತಿದ್ದು ಪ್ರವಾಹ ಬಂದರಷ್ಟೇ ನದಿ ಪಾತ್ರದ ಗ್ರಾಮಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡುತ್ತಾರೆ ಎಂಬುದು ಇಲ್ಲಿನ ಜನರ ನೋವಿನ ಮಾತಾಗಿದೆ.

ABOUT THE AUTHOR

...view details