ಚಾಮರಾಜನಗರ :ಮೌನವಾಗಿ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಆರ್ಎಸ್ಎಸ್ ಮ್ಯೂಸಿಯಂ ಒಳಗೆ ದಲಿತರಿಗೆ ಪ್ರವೇಶಕ್ಕೆ ಅವಕಾಶವಿಲ್ಲವೆಂಬುದು ಹಸಿ ಸುಳ್ಳು. ಏನಾದರೂ ದಲಿತರಿಗೆ ಅವಕಾಶವಿಲ್ಲ ಎನ್ನುವುದು ನಿಜವಾದರೇ ಅದನ್ನು ಗೂಳಿಹಟ್ಟಿ ಶೇಖರ್ ಸಾಬೀತುಪಡಿಸಲಿ ಎಂದು ಮಾಜಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರ ವಾಟ್ಸಪ್ ಆಡಿಯೋದಲ್ಲಿರುವ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಸೈಕಾಲಜಿ ವಿದ್ಯಾರ್ಥಿಯಾದ ನನಗೆ ಅವರು ಹೇಳಿರುವುದು ಸುಳ್ಳು ಅನಿಸುತ್ತದೆ. ಆಡಿಯೋದಲ್ಲಿರುವಂತೆ ಸಂತೋಷ್ ಜೀ ಅವರೊಂದಿಗೆ ಗೂಳಿಹಟ್ಟಿ ಶೇಖರ್ ಮಾತನಾಡುತ್ತಿದ್ದಾರೆ. ಆದರೆ, ಸಂತೋಷ್ ಜೀ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ, ಹಾಗಾಗಿ ಇದು ಸುಳ್ಳು ತಾನೇ? 10 ತಿಂಗಳ ಹಿಂದೆ ನಡೆದಿರುವ ಘಟನೆಯನ್ನು ಈಗ ಏಕೆ ಮಾತನಾಡುತ್ತಿದ್ದಾರೆ? ಇದನ್ನೆಲ್ಲ ನೋಡಿದ ಮೇಲೆ ಗೂಳಿಹಟ್ಟಿ ಶೇಖರ್ ಏನೋ ಹುನ್ನಾರ ಇಟ್ಟುಕೊಂಡಂತಿದೆ. ಅದನ್ನು ಸಾಧಿಸಲು ಈಗ ಆರ್ಎಸ್ಎಸ್ನ ಸ್ಥಾಪಕ ಹೆಡ್ಗೇವಾರ್ ಮ್ಯೂಸಿಯಂ ಒಳಗೆ ದಲಿತರಿಗೆ ಪ್ರವೇಶವಿಲ್ಲ ಎಂಬ ವಿಚಾರವನ್ನು ಎತ್ತಿದ್ದಾರೆ ಎಂದರು.
ನಾನು ಕಳೆದ ಮೂರು ವರ್ಷಗಳಿಂದ ಬಿಜೆಪಿಯಲ್ಲಿದ್ದು, ಜೊತೆ ಜೊತೆಗೆ ಸಂಘ ಪರಿವಾರದ ಸಂಪರ್ಕದಲ್ಲಿದ್ದೇನೆ. ಅಲ್ಲದೆ, ಹಲವು ಕಾರ್ಯಗಳಿಗೆ ಹೋಗಿದ್ದೇನೆ. ಆರ್ಎಸ್ಎಸ್ ಪ್ರಮುಖರೊಂದಿಗೆ ನನಗೆ ಸಂಪರ್ಕವಿದೆ. ನನಗೆ ಅನಿಸುವಾಗೆ ಎಲ್ಲಿಯೂ ಜಾತಿ ಬೇಧ ಮಾಡಿಲ್ಲ. ಇವತ್ತು ಸಮಾಜದಲ್ಲಿ ಅಸ್ಪೃಶ್ಯತೆ ಇದೆ. ಅದರೆ ಅದು ಹೇಗಿದೆ? 50 ವರ್ಷಗಳ ಹಿಂದೆ ಇದ್ದಂತಹ ವ್ಯವಸ್ಥೆ ಈಗ ಇಲ್ಲ. ಇವತ್ತು ದಲಿತರಿಗೆ ದೇವಸ್ಥಾನ, ಹೋಟೆಲ್ಗಳಿಗೆ ಬರಬೇಡ ಎನ್ನುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಆರ್ಎಸ್ಎಸ್ ಮ್ಯೂಸಿಯಂನೊಳಗೆ ದಲಿತರಿಗೆ ಪ್ರವೇಶವಿಲ್ಲ ಎಂಬುದು ಸುಳ್ಳು. ನಾನು ಚುನಾವಣೆಯಲ್ಲಿ ಸೋತಿದ್ದು, ನಾನೇನಾದರೂ ಇಲ್ಲದ್ದನ್ನು ಮಾತನಾಡುತ್ತಿದ್ದೇನಾ? ಎಂದು ಗೂಳಿಹಟ್ಟಿ ವಿರುದ್ಧ ಎನ್ ಮಹೇಶ್ ಕಿಡಿಕಾರಿದರು.