ಮೈಸೂರು:ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ನಾಳೆ ಕರ್ನಾಟಕದಾದ್ಯಂತ ಕರೆದಿರುವ ಬಂದ್‌ಗೆ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವ್ಯಾಪಾರಿಗಳು, ವರ್ತಕರು, ಹೋಟೆಲ್ ಮಾಲೀಕರ ಸಂಘ, ಮೈಸೂರು ಕನ್ನಡ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಬೆಂಬಲಿಸಲು ನಿರಾಕರಿಸಿವೆ.
ಕರ್ನಾಟಕ ಬಂದ್ : ಮೈಸೂರು, ಚಾಮರಾಜನಗರದಲ್ಲಿಲ್ಲ ಬೆಂಬಲ ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಪರ-ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅನೇಕ ಕನ್ನಡಪರ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿಗೆ ಬೆಂಬಲ ಕೊಟ್ಟಿವೆ. ಆದರೆ ಕರ್ನಾಟಕ ಬಂದ್‌ಗೆ ಬೆಂಬಲ ನೀಡಲು ನಿರಾಕರಿಸಿವೆ
ಚಾಮರಾಜನಗರದಲ್ಲಿಲ್ಲ ಬಂದ್ನ ಬಿಸಿ:
ಚಾಮರಾಜನಗರ ಜಿಲ್ಲೆಯಲ್ಲಿಯೂ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಆದರೆ, ಎಸ್ಡಿಪಿಐ ಬೆಂಬಲಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಬಂದ್ ಕುರಿತು ಕನ್ನಡಪರ ಚಳವಳಿಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ. ಆದರೆ, ದಿಢೀರನೇ ಬಂದ್‌ಗೆ ಕರೆ ಕೊಟ್ಟಿರುವುದು ಸರಿಯಲ್ಲ, ನಮ್ಮ ಬೆಂಬಲ ಬೇಕೆಂದು ಅವರೂ ಕೂಡ ಕೇಳಿಲ್ಲವಾದ್ದರಿಂದ ನಾವು ಬಂದ್ ಮಾಡುತ್ತಿಲ್ಲ. ಬಹುತೇಕ ಕನ್ನಡಪರ ಸಂಘಟನೆಗಳು ಬೆಂಬಲ ಕೊಟ್ಟಿಲ್ಲವಾದ್ದರಿಂದ ಬಂದ್ಗೇನೂ ಉತ್ತಮ ಪ್ರತಿಕ್ರಿಯೆ ಸಿಗುವುದಿಲ್ಲ ಎಂದು ತಿಳಿಸಿದರು.
ಪರಿಸ್ಥಿತಿ ಅವಲೋಕಿಸಿ ಬಸ್ ಸಂಚಾರ:
ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ, ಪರಿಸ್ಥಿತಿ ಅವಲೋಕಿಸಿ ಬಸ್ ಸಂಚಾರ ಇರಲಿದ್ದು, ಬೆಳಗ್ಗೆ 6-9 ರವರೆಗೆ ಹಾಗೂ ಸಂಜೆ 4 ರ ಬಳಿಕ ಬಸ್ ಸಂಚಾರ ಯಥಾಸ್ಥಿತಿ ಇರಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮುನ್ನೆಚ್ಚರಿಕೆಯಾಗಿ ಮುಂಜಾನೆಯ ಬಸ್ ಬಳಸಬೇಕೆಂದು ಮನವಿ ಮಾಡಿದರು.