ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪವಾದ ತುಳಸಿ ಮರ ಇದೆ ಎಂಬ ಮಾಹಿತಿಯುಳ್ಳ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ವೈರಲ್ ಮೆಸೇಜ್ನ ಜಾಡು ಹಿಡಿದು ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದಾಗ, ವೈರಲ್ ಆಗಿರುವ ಫೋಟೋದಲ್ಲಿರುವುದು ತುಳಿಸಿ ಮರವಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ. ಅದೊಂದು ಕಾಡು ಜಾತಿಯ ಮರವಾಗಿದ್ದು, ಮೃದು ಕಾಂಡ ಒಳಗೊಂಡಿದೆ. ಇದನ್ನು ಪ್ರಾಣಿಗಳು ಕೂಡ ತಿನ್ನಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬಿಳಿಗಿರಿ ರಂಗನ ಬೆಟ್ಟದಲ್ಲಿರುವುದು ತುಳಸಿ ಮರವಲ್ಲ ಈ ಕುರಿತು ಅರಣ್ಯ ಇಲಾಖೆಯಲ್ಲಿ 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮಹದೇವಯ್ಯ ಎಂಬವರು ಈಟಿವಿ ಭಾರತದೊಂದಿಗೆ ಮಾತನಾಡಿ, ನಾನು ಇದುವರೆಗೂ ಇಲ್ಲಿ ತುಳಸಿ ಮರ ನೋಡಿಲ್ಲ. ವೈರಲ್ ಆಗಿರುವ ಮರದ ಚಿತ್ರವು ತುಳಸಿ ಮರದ್ದಲ್ಲ. ಅದನ್ನು ಸ್ಥಳೀಯರು ನೇಲಾಡಿ, ಉಲುಬೆ ಮರ ಎಂದು ಕರೆಯುತ್ತಾರೆ. ತುಳಸಿ ಗಿಡದ ರೀತಿ ಇದರ ಗೊಂಡೆಯೂ ಇರುವುದರಿಂದ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ ಎಂದರು.
ಬಿಳಿಗಿರಿರಂಗನ ಬೆಟ್ಟದ ಚೆಕ್ ಪೋಸ್ಟ್ನಿಂದ ಒಂದು ಕಿ.ಮೀ. ದೂರದ ರಸ್ತೆ ಬದಿಯಲ್ಲಿನ ಮರವನ್ನು ಸೆರೆ ಹಿಡಿದು ತುಳಸಿಮರ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ರೀತಿಯ ಮರಗಳು ಬಿಆರ್ಟಿ ಅರಣ್ಯ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ನೂರಾರಿವೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ತುಳಿಸಿ ಮರ ಇದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂಬುದು ಸ್ಥಳೀಯರ ಮಾತು.