ಚಾಮರಾಜನಗರ: ಬಿಎಸ್ವೈ ಅಭಿಮಾನಿಗಳ ಘೇರಾವ್, ಪ್ರತಿಭಟನೆಯ ಬಳಿಕವೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೊತೆಗೆ ತನ್ನ ಉಚ್ಛಾಟನೆ ಅಷ್ಟು ಸುಲಭವಲ್ಲ ಎಂದು ಹೇಳಿದರು.
ನಗರದ ವರ್ತಕರ ಭವನದಲ್ಲಿ ಆಯೋಜಿಸಿದ್ದ ಪಂಚಮಸಾಲಿ ಹೋರಾಟ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟು ಒಂದೂವರೆ ವರ್ಷ ಆಯ್ತು. ಈಗಲೂ ನಾನು ಬಿಜೆಪಿ ಶಾಸಕನಿದ್ದೇನೆ. ಆರಾಮವಾಗಿಯೇ ಇದ್ದೇನೆ. ನನ್ನ ಹಿಂದೆ ಹಿಂದೂ ಹಾಗೂ ಸಮುದಾಯದ ದೊಡ್ಡ ಶಕ್ತಿ ಇದೆ, ನನ್ನ ಉಚ್ಛಾಟನೆ ಅಷ್ಟು ಹಗುರವಲ್ಲ ಎಂದರು.
ನಾನು ಸಿಎಂ ನಿವಾಸಕ್ಕೆ ಹೋಗಿ ಒಂದೂವರೆ ವರ್ಷ ಆಯ್ತು. ಅದರ ಪಾಡಿಗೆ ಅನುದಾನ ಬರುತ್ತಿದೆ. ಅಭಿವೃದ್ಧಿ ಆಗುತ್ತಿದೆ. ಲಸಿಕೆ ಅಭಿಯಾನದಲ್ಲಿ ವಿಜಯಪುರವನ್ನು ನಂ.1 ಮಾಡಿದ್ದೇನೆ. ನನಗೆ ಅಕ್ರಮ ಆಸ್ತಿ ಇದೆಯೇ ಎಂದು ತನಿಖೆ ನಡೆಸಿದರು. ಸಾವಿರಾರು ಕೋಟಿ ಲೂಟಿ ಹೊಡೆಯುವ ರಾಜಕಾರಣಿ ನಾನಲ್ಲ, ಪ್ರಾಮಾಣಿಕವಾಗಿರುವುದಿಂದಲೇ ಇಷ್ಟು ಧೈರ್ಯದಿಂದ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.
ನನ್ನನ್ನು ಮುಗಿಸಲು ಬಹಳ ಮಂದಿ ಪ್ರಯತ್ನ ಮಾಡುತ್ತಿದ್ದಾರೆ, ಶ್ರೀರಾಮುಲು ಪಿಎ ರೀತಿ ಬಲಿಪಶು ಮಾಡಲು ಕಾಯುತ್ತಿದ್ದಾರೆ, ಅದೆಲ್ಲಾ ಸಫಲವಾಗುವುದಿಲ್ಲ. ಬೆಂಗಳೂರಿನಲ್ಲಿ 10 ಲಕ್ಷ ಮಂದಿ ಸೇರಿದ ಪಂಚಮಸಾಲಿಯ ಸಮಾವೇಶ ಕಂಡು ಹೈಕಮಾಂಡ್ ತಮ್ಮ ಶಕ್ತಿ ಅರಿತಿದೆ. ಕೊರೊನಾ ಕಾರಣದಿಂದ ನಿಂತಿದ್ದ ನಮ್ಮ ಹೋರಾಟ ಮುಂದುವರೆಯಲಿದ್ದು, ದೆಹಲಿಗೂ ನಿಯೋಗ ಹೋಗುತ್ತೇವೆ ಎಂದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಒಕ್ಕೂಟ ಒಡೆಯಲು, ಬಲ ಕುಗ್ಗಿಸಲು ಯತ್ನ ನಡೆಯುತ್ತಿದೆ. ಇದಕ್ಕೆಲ್ಲಾ ಎದೆಗುಂದದೇ ಹೋರಾಟ ಮುಂದುವರಿಸೋಣ, ವಿರೋಧಿಗಳು ಕೂಡ ಮುಂದೆ ಪರಿವರ್ತನೆ ಆಗುತ್ತಾರೆ, ರಾಜಕೀಯ ಶಕ್ತಿ ತೋರಿಸಿ ಮೀಸಲಾತಿ ಪಡೆಯೋಣ ಎಂದು ಕರೆಕೊಟ್ಟರು.