ಚಾಮರಾಜನಗರ: ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ, ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಇಲ್ಲ: ಚಾಮರಾಜನಗರ ಡಿಸಿ ಸ್ಪಷ್ಟನೆ - There are no corona cases in Chamarajanagar
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ವಿದೇಶದಿಂದ ಬಂದ ಮೂರು ಮಂದಿಯನ್ನು ಈಗಾಗಲೇ ತಪಾಸಣೆಗೆ ಒಳಪಡಿಸಲಾಗಿದೆ. ಅವರ ತಾತ್ಕಾಲಿಕ ವರದಿಯಲ್ಲಿ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಮಾತನಾಡಿ, ವಿದೇಶದಿಂದ ಬಂದಿದ್ದ ಮೂರು ಮಂದಿಯ ಗಂಟಲು ದ್ರವ, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ತಾತ್ಕಾಲಿಕ ವರದಿ ಬಂದಿದ್ದು, ಮೂವರದ್ದು ನೆಗೆಟಿವ್ ಬಂದಿದೆ. ಆದರೂ, ಅವರನ್ನು ಆಸ್ಪತ್ರೆಯಲ್ಲಿ 14 ದಿನಗಳ ಕಾಲ ನಿಗಾ ಇಡಲಾಗುತ್ತದೆ ಎಂದು ಹೇಳಿದರು.
ಒಟ್ಟು 33 ಮಂದಿ ವಿದೇಶದಿಂದ ಜಿಲ್ಲೆಗೆ ಬಂದಿದ್ದು, ಅವರಲ್ಲಿ 4 ಮಂದಿ 14 ದಿನಗಳ ಕಾಲ ನಿಗಾದಲ್ಲಿದ್ದರು, ಅವರಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ಇನ್ನೂ 26 ಮಂದಿ ನಿಗಾದಲ್ಲಿದ್ದಾರೆ. ಆದ್ದರಿಂದ ವದಂತಿಗಳಿಗೆ ಯಾರೂ ಕಿವಿಗೊಡದೇ ಮುನ್ನೆಚ್ಚರಿಕೆಯಿಂದ ಇರಿ. ಸಾಧ್ಯವಾದಷ್ಟು ಪರಸ್ಪರ ಅಂತರವನ್ನು ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.