ಚಾಮರಾಜನಗರ: ಕೆಎಸ್ಆರ್ಟಿಸಿ ಚಾಮರಾಜನಗರ ಡಿಪೋಗೆ ಅತಿಕ್ರಮ ಪ್ರವೇಶ ಮಾಡಿ, ನಗದು ಶಾಖೆಯಲ್ಲಿ 28 ಲಕ್ಷ ರೂ. ಗಳನ್ನು ಕಳ್ಳತನ ಮಾಡಿದ್ದ ಮೂವರು ಅಪರಾಧಿಗಳಿಗೆ 9 ವರ್ಷ ಜೈಲು ಶಿಕ್ಷೆಯಾಗಿದೆ.
ಜೈಲು ಶಿಕ್ಷೆಯ ಜೊತೆಗೆ ತಲಾ 20 ಸಾವಿರ ರೂ. ದಂಡ ವಿಧಿಸಿ, ನಗರದ ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯ ಶನಿವಾರ ಮಹತ್ವದ ತೀರ್ಪು ನೀಡಿದೆ.ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ಮಜಿದ್, ಕಿಫ್‌ಯಿತ್ ವುಲ್ಲಾ ಷರೀಫ್ ಬಿನ್ ಇನಾಯಿತ್ ವುಲ್ಲಾ ಷರೀಫ್ ಹಾಗೂ ಲೋಕೇಶ್ ಬಿನ್ ಕುಮಾರ್ ಎಂಬುವರ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾ. ರಮೇಶ್ ಅವರು ಡಿಪೋ ಅತಿಕ್ರಮ ಪ್ರವೇಶ ಮಾಡಿದ್ದಕ್ಕೆ 5 ವರ್ಷಗಳ ಶಿಕ್ಷೆ ಹಾಗೂ 28 ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ್ದಕ್ಕೆ 4 ವರ್ಷಗಳ ಶಿಕ್ಷೆ ಹಾಗೂ ತಲಾ 20 ಸಾವಿರ ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಮತ್ತೆ 6 ತಿಂಗಳ ಶಿಕ್ಷೆಯನ್ನೂ ಅನುಭವಿಸುವಂತೆ ಸೂಚನೆ ನೀಡಿದ್ದಾರೆ.