ಚಾಮರಾಜನಗರ: ದೇಶದ ಕರಾಳ ಕಾನೂನಾದ ಪೌರತ್ವ ವಿಧೇಯಕದ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿದರು.
ಪೌರತ್ವ ಕಾಯ್ದೆ ವಿರುದ್ಧ ಕಾನೂನು ಹೋರಾಟ: ಮಾಜಿ ಸಂಸದ ಆರ್.ಧ್ರುವನಾರಾಯಣ
ದೇಶದ ಕರಾಳ ಕಾನೂನು ಪೌರತ್ವ ವಿಧೇಯಕದ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಕಾನೂನು ವಿಭಾಗ ಸಕ್ರಿಯವಾಗಿದ್ದು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕಾನೂನನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಸಿಎಎ ಮತ್ತು ಎನ್ಆರ್ಸಿ ದೇಶದ ಅಸ್ಥಿರತೆಗೆ ಕಾರಣವಾಗಲಿದ್ದು, ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ಯೋಜನೆಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಇನ್ನು ರಾಜ್ಯವ್ಯಾಪಿ ಸೆಕ್ಷನ್ 144 ಜಾರಿಗೊಳಿಸಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೇ ಪೊಲೀಸರ ಮೂಲಕ ನಿಯಂತ್ರಣ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಕೆಲವರ ಕಿಡಿಗೇಡಿತನಕ್ಕೆ ಅಮಾಯಕರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದು, ಗುಂಡು ಹಾರಿಸಿದರೂ ಯಾರೂ ಮೃತಪಡಲಿಲ್ಲ ಎಂಬ ಪೊಲೀಸರೊಬ್ಬರ ಮಾತು ತೀವ್ರ ಖಂಡನೀಯ. 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಒಂದೂ ಈ ರೀತಿಯ ಅವಘಡಗಳಾಗಿರಲಿಲ್ಲ. ಆದರೆ, ಬಿಜೆಪಿ ಬಂದಾಗಲೆಲ್ಲ ಗೋಲಿಬಾರಾಗಿದೆ. ಅಂದು ರೈತರಿಗೆ ಗುಂಡಿಟ್ಟಿದ್ದರು. ಇಂದು ಅಮಾಯಕರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಕಿಡಿಕಾರಿದರು.