ಚಾಮರಾಜನಗರ: ಮದುವೆ ಹಿಂದಿನ ದಿನ ವರನೊಬ್ಬ ಕೈಕೊಟ್ಟು ಪರಾರಿಯಾದ ಹಿನ್ನೆಲೆ ಮದುವೆಗಾಗಿ ತಿಂಗಳುಗಟ್ಟಲೇ ಕಾದು ಕುಳಿತ್ತಿದ್ದ ಯುವತಿಯ ಬಾಳು ಈಗ ಕತ್ತಲ್ಲಲ್ಲಿ ಮುಳುಗಿದೆ. ಇದರಿಂದಾಗಿ ಹುಡುಗನ ಮನೆ ಮುಂದೆ ವಧುವಿನ ಮನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ನಡೆದಿದೆ.
ಏನಿದು ಪ್ರಕರಣ?:ಕೊಳ್ಳೇಗಾಲದ ಶಂಕನಪುರ ಬಡಾವಣೆಯ ನಿವಾಸಿ ದಿವ್ಯಶ್ರೀ ಪ್ರತಿಭಟನೆ ಮಾಡಿದ ಯುವತಿಯಾಗಿದ್ದು, ಕುಂತೂರು ಗ್ರಾಮದ ಮಹೇಶ್ ಎಂಬಾತ ಮದುವೆ ಹಿಂದಿನ ದಿನ ಪರಾರಿಯಾದ ವರನಾಗಿದ್ದಾನೆ.
ಬೆಂಗಳೂರಲ್ಲಿ ಪ್ರೇಮ್ ಕಹಾನಿ: ಬೆಂಗಳೂರಿನಲ್ಲಿ ದಿವ್ಯಶ್ರೀ ಹಾಗೂ ಮಹೇಶ್ ನಡುವೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ನಂತರ ಇವರಿಬ್ಬರು ಕಳೆದ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಒಟ್ಟಾಗಿ ಇದ್ದರು.
ಕೆಲ ತಿಂಗಳ ಹಿಂದಷ್ಟೆ ಯುವತಿ ನನ್ನನ್ನು ಮದುವೆ ಆಗು ಎಂದು ಮಹೇಶ್ ಅವರನ್ನ ಕೇಳಿದ್ದಳು. ಮೂರು ತಿಂಗಳು ಬಳಿಕ ಇಬ್ಬರೂ ಮದುವೆ ಆಗೋಣ ಎಂಬ ಭರವಸೆಯನ್ನು ಮಹೇಶ್ ಕೂಡ ನೀಡಿದ್ದ. ಆದರೆ, ಮಾತಿಗೆ ನಡೆದುಕೊಳ್ಳದ ಕಾರಣ ತನ್ನ ಪಾಲಕರ ಬಳಿ ಯುವತಿ ಅಳಲು ತೋಡಿಕೊಂಡಿದ್ದಳು. ಅದರಂತೆ ಇತ್ತೀಚೆಗಷ್ಟೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಮತ್ತು ಯುವತಿಯ ಪಾಲಕರು ಎರಡು ಊರಿನ ಯಜಮಾನರು ಒಂದೆಡೆ ಸೇರಿ ಪಂಚಾಯಿತಿ ಮಾಡುವ ಮೂಲಕ ಇವರಿಬ್ಬರಿಗೂ ಚಿಲಕವಾಡಿ ದೇವಾಲಯದಲ್ಲಿ ಮದುವೆ ನಿಶ್ಚಯ ಮಾಡಿದ್ದರು. ಇಷ್ಟಾದರೂ ಯುವಕ ಪರಾರಿಯಾಗಿದ್ದಾನೆ.
ಮದುವೆ ಹಿಂದಿನ ದಿನ ಯುವಕ ನಾಪತ್ತೆ: ಅದರಂತೆ, ಎರಡು ಮನೆಯವರು ಒಪ್ಪಿ ನವೆಂಬರ್ 27 ರಂದು ಚಿಲಕವಾಡಿ ಬೆಟ್ಟದಲ್ಲಿ ಮದುವೆ ನಿಶ್ಚಯ ಮಾಡಲಾಗಿತ್ತು. ವಧುವಿಗೆ ತಾಳಿ, ಸೀರೆ, ಕಾಲುಂಗುರ ಖರೀದಿಸಿ ಮದುವೆ ಸಂಭ್ರಮದಲ್ಲಿ ಕುಟುಂಬಸ್ಥರಿದ್ದರು. ಆದರೆ, ನವೆಂಬರ್ 26 ರಂದು ಮಹೇಶ್ ತನ್ನ ಫೋನ್ ಸ್ವೀಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಗೆ ದಿವ್ಯಶ್ರೀ ದೂರು ಕೂಡ ಕೊಟ್ಟಿದ್ದಾರೆ. ಆದರೆ, ತಿಂಗಳು ಆದರೂ ವರನ ಸುಳಿವು ಇಲ್ಲದೇ ಇರುವುದರಿಂದ ಬೇಸತ್ತು ಆತನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಹೇಶ್ನನ್ನು ಹುಡುಕಿ ಕೊಡಲಾಗುವುದು ಎಂದು ಸಮಾಧಾನ ಪಡಿಸಿ ಆಕೆಯನ್ನು ಶಂಕನಪುರ ಗ್ರಾಮಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಮಗನ 'ಪ್ರೀತಿ', ತಾಯಿಗೆ ಶಿಕ್ಷೆ; ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ