ಚಾಮರಾಜನಗರ: ಬರೋಬ್ಬರಿ 70 ದಿನಗಳ ಬಳಿಕ ಗಡಿಜಿಲ್ಲೆಯ ಪ್ರಮುಖ ದೇಗುಲಗಳು ಇಂದಿನಿಂದ ಭಕ್ತರಿಗೆ ಮುಕ್ತವಾಗಿದ್ದು ದೇವರಿಗೆ ವಿಶೇಷ ಪೂಜೆ - ಪುನಸ್ಕಾರ ನಡೆಯಿತು.
ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿದ್ದು, ಸಾಮಾಜಿಕ ಅಂತರದ ಜೊತೆಗೆ ತಪಾಸಣೆ ಮಾಡಿಸಿದ ಬಳಿಕ ದೇಗುಲ ಪ್ರವೇಶ ಮಾಡಬೇಕಿತ್ತು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದ್ದು, ಮಂಗಳಾರತಿ ಮತ್ತು ತೀರ್ಥದ ವ್ಯವಸ್ಥೆ ಇರಲಿಲ್ಲ. ಆದರೆ, ಲಾಡು ಪ್ರಸಾದ ಹಾಗೂ ಉಪಾಹಾರ ವ್ಯವಸ್ಥೆಯನ್ನ ಪ್ರಾಧಿಕಾರ ಕಲ್ಪಿಸಿತ್ತು.
ದರ್ಶನ ಕೊಟ್ಟ ಮುದ್ದು ಮಾದಪ್ಪ ಪರ ಮಾಡಲು ಹಾಗೂ ತಮಿಳುನಾಡಿನ ಭಕ್ತರ ಪ್ರವೇಶಕ್ಕೆ ಪ್ರಾಧಿಕಾರ ನಿರ್ಬಂಧಿಸಿದ್ದು, ಕೋವಿಡ್-19 ಭೀತಿಯಲ್ಲಿ ಹಲವು ಮುನ್ನೆಚ್ಚರಿಕೆ ಕೈಗೊಂಡು ಮಾದಪ್ಪನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಉಳಿದಂತೆ, ಚಾಮರಾಜನಗರದ ಚಾಮರಾಜೇಶ್ವರ ದೇಗುಲವೂ ಇಂದು ಭಕ್ತರ ಪ್ರವೇಶ ಕಲ್ಪಿಸಿದ್ದು, ಮುಖ್ಯದ್ವಾರದಲ್ಲೇ ಸ್ಕ್ರೀನಿಂಗ್ ಮಾಡಿ ಬಳಿಕ ಮಾಸ್ಕ್ ಕಡ್ಡಾಯ ಮಾಡಿ ಭಕ್ತರನ್ನು ಒಳಕ್ಕೆ ಬಿಡಲಾಗುತ್ತಿದೆ. ಹರಳುಕೋಟೆ ಜನಾರ್ದನ ಸ್ವಾಮಿ ದೇಗುಲದಲ್ಲಿ ಕೊರೊನಾ ಮುಕ್ತ ಚಾಮರಾಜನಗರ ಭವಿಷ್ಯದಲ್ಲೂ ಹಸಿರುವಲಯದಲ್ಲೇ ಮುಂದುವರೆಯಲಿ ಎಂದು ವಿಶೇಷ ಪೂಜೆ ನಡೆಸಲಾಯಿತು.
ಗೋಪಾಲನ ಸನ್ನಿಧಿಗೆ ಪ್ರವಾಸಿಗರ ದಾಂಗುಡಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಒಳಪಡುವ ಹಿಮವದ್ ಗೋಪಾಲಸ್ವಾಮಿ ದೇಗುಲಕ್ಕೆ 8.30 ರಿಂದಲೇ ಪ್ರವಾಸಿಗರು, ಭಕ್ತರು ದಾಂಗುಡಿ ಇಟ್ಟರು. ಈ ಕುರಿತು ದೇಗುಲದ ಅರ್ಚಕರಾದ ಗೋಪಿ ಮತ್ತು ವಾಸು ಈಟಿವಿ ಭಾರತಕ್ಕೆ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೃತ್ತಗಳನ್ನು ಬರೆದಿದ್ದು, ಒಬ್ಬರ ಬಳಿಕ ಒಬ್ಬರು ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗೋಪಾಲಸ್ವಾಮಿ ಬೆಟ್ಟದಲ್ಲಿನ ಹಿಮಾಚ್ಛಾದಿತ ವಾತಾವರಣ ಕಾಣಲೇ ದೂರ ದೂರುಗಳಿಂದ ಪ್ರವಾಸಿಗರು ಬರುತ್ತಿದ್ದು ಇಲ್ಲಿನ ತಂಪು ತಂಪು ವಾತಾವರಣಕ್ಕೆ ಮನ ಸೋತಿದ್ದಾರೆ ಎಂದರು.
ಇಂದು ಗಡಿಜಿಲ್ಲೆಯ ಬಹುತೇಕ ಎಲ್ಲ ದೇಗುಲಗಳಿಗೂ ಭಕ್ತರ ದಂಡೇ ಹರಿದುಬಂದಿದ್ದು, ಎರಡೂವರೆ ತಿಂಗಳ ಬಳಿಕ ದೇವರ ಸನ್ನಿಧಿಗೆ ಭಕ್ತರು ಆಗಮಿಸಿದ್ದಾರೆ.