ಕೊಳ್ಳೇಗಾಲ (ಚಾಮರಾಜನಗರ):ತಾಲೂಕಿನ ಉಗನೀಯ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಮಾರ ಎಂಬ ವ್ಯಕ್ತಿಯನ್ನು ಗ್ರಾಮದ ಯಜಮಾನರು ಕುಲದಿಂದ ಹೊರಹಾಕ್ಕಿದ್ದಾರೆ ಎಂದು ತಹಶೀಲ್ದಾರ್ ಅವರಿಗೆ ದೂರು ನೀಡಿದ ಅನ್ವಯ ಶನಿವಾರ ಗ್ರಾಮದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಯಿತು.
ಗ್ರಾಮದ ಚಾವಡಿಯಲ್ಲಿ ತಹಶೀಲ್ದಾರ್ ಕುನಾಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್, ಸಿ.ಪಿ.ಐ ಶ್ರೀಕಾಂತ್, ಪಿ.ಎಸ್.ಐ ಅಶೋಕ್ ಹಾಗೂ ಗ್ರಾಮದ ಮುಖಂಡರು, ಯಜಮಾನರು ಮತ್ತು ದೂರುದಾರರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ನಂತರ ದೂರುದಾರ ಕುಮಾರ ಹಾಗೂ ಗ್ರಾಮದ ಯಜಮಾನರಿಂದ ಮಾಹಿತಿ ಪಡೆದುಕೊಂಡ ತಹಶೀಲ್ದಾರ್ ಕುನಾಲ್ ಮಾತನಾಡಿ, ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕುಲದಿಂದ ಹೊರ ಹಾಕಿದ್ದಾರೆ ಎಂಬ ಕುಮಾರ್ ದೂರಿನ್ವಯ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಕುಮಾರ್ ಮತ್ತು ಅಲ್ಲಿನ ಯಜಮಾನರ ಸಮ್ಮುಖದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದೇನೆ ಎಂದರು.
ಎಲ್ಲರೂ ಅಣ್ಣ ತಮ್ಮಂದಿರಂತೆ ಒಟ್ಟಾಗಿ ವಿಶ್ವಾಸದಿಂದ ಗ್ರಾಮದಲ್ಲಿ ಇರಬೇಕು ಎಂದು ತಿಳಿ ಹೇಳಿದರು.
ನಂತರ ಸಿಪಿಐ ಶ್ರೀಕಾಂತ್ ಮಾತನಾಡಿ, ಗ್ರಾಮದಲ್ಲಿ ಎಲ್ಲಾ ಕೋಮಿನ ಜನಾಂಗದವರು ಸೇರಿ ಸಹ ಬಾಳ್ವೆಯಿಂದ ಇರಬೇಕು, ಸಮಸ್ಯೆ ಬಂದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.