ಚಾಮರಾಜನಗರ:ಜಿಲ್ಲೆಯಲ್ಲಿ ಹಾದುಹೋಗಿರುವ ಕನಕಪುರ-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕರಾದ ಎನ್.ಮಹೇಶ್ ಮತ್ತು ನಿರಂಜನಕುಮಾರ್ ಗರಂ ಆದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ತೆವಳುತ್ತಾ ಸಾಗಿರುವ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ವಿರುದ್ದ ಸಚಿವ, ಸಂಸದ ಹರಿಹಾಯ್ದರೆ, ಅವೈಜ್ಞಾನಿಕ ಕಾಮಗಾರಿ ಉಲ್ಲೇಖಿಸಿ ಶಾಸಕ ಎನ್. ಮಹೇಶ್ ಕಿಡಿಕಾರಿದರು.
ಚಾಮರಾಜನಗರದಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಜಿಲ್ಲೆಯ ಕೊಳ್ಳೇಗಾಲದ ಸತ್ತೇಗಾಲದಿಂದ ಚಾಮರಾಜನಗರ ತಾಲೂಕಿನ ಪುಣಜನೂರಿನವರೆಗೆ ಹೆದ್ದಾರಿ ಜಿಲ್ಲೆಯಲ್ಲಿ ಹಾದು ಹೋಗಿದ್ದು, ಜಿಲ್ಲೆಯಲ್ಲೇ ಒಟ್ಟು 67 ಕಿ.ಮೀ. ರಸ್ತೆ ಆಗಬೇಕಿದ್ದು ಈಗಾಗಲೇ ಕಾಮಗಾರಿ ಮುಗಿದಿರಬೇಕಿತ್ತು. ಕೆಲವೆಡೆ ಬೈಪಾಸ್ ಆದರೆ, ಕಾಮಗಾರಿ ತೆವಳುತ್ತಾ ಸಾಗಿರುವುದಕ್ಕೆ ಸಚಿವರಾದಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶ್ರೀಧರ್, ಎಇಇ ಸುರೇಶ್ ಕುಮಾರ್ ಕಾರ್ಯದ ವಿರುದ್ಧ ಅಸಮಾಧಾನ ಹೊರಹಾಕಿದರು.
ಮುಗಿಯದ ಗೊಂದಲ-ಸಿಗದ ಪರಿಹಾರ: ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಬರೋಬ್ಬರಿ ಒಂದು ತಾಸು ಚರ್ಚೆ ನಡೆಸಿದರೂ ಗೊಂದಲವೂ ಬಗೆಹರಿಯಲಿಲ್ಲ- ನೂರೆಂಟು ಸಮಸ್ಯೆಗಳ ರಾಷ್ಟ್ರೀಯ ಹೆದ್ದಾರಿಗೆ ಪರಿಹಾರವೂ ಸಿಗಲಿಲ್ಲ.
ನಗರದೊಳಗೆ ಹಾದು ಹೋಗಿರುವ ರಸ್ತೆಯನ್ನು ರಾಜ್ಯ ಹೆದ್ದಾರಿ, ನಗರದ ಹೊರವಲಯಕ್ಕೆ ರಾಷ್ಟ್ರೀಯ ಹೆದ್ದಾರಿ, ಫುಟ್ ಪಾತ್ ಗೊಂದಲ, ಸ್ಥಳೀಯ ಸಂಸ್ಥೆ ಬೀದಿ ದೀಪ ಅಳವಡಿಬೇಕಾದ ಜವಾಬ್ದಾರಿ ಹೀಗೆ ಒಂದೊಂದು ಕೆಲಸವನ್ನು ತಮಗೆ ಬರುವುದಿಲ್ಲ ಎನ್ನುತ್ತಿದ್ದ ಶ್ರೀಧರ್ ಮತ್ತು ಎಇಇ ಸುರೇಶ್ ಕುಮಾರ್ಗೆ ಎನ್.ಮಹೇಶ್ ಚಳಿ ಬಿಡಿಸಿದರೂ ಈಗಾಗಲೇ ನಡೆಸಿರುವ ಅವೈಜ್ಞಾನಿಕ ಕಾಮಗಾರಿಗೆ ಪರಿಹಾರ ಸಿಗಲಿಲ್ಲ.
ಇದೇ ವೇಳೆ, ಗುತ್ತಿಗೆ ಪಡೆದುಕೊಂಡಿರುವ ಗುಜರಾತ್ ಮೂಲದ ಸದ್ಭಾವನಾ ಸಂಸ್ಥೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಅಂಶವನ್ನು ರಾ.ಹೆ. ಪ್ರಾಧಿಕಾರದ ಶ್ರೀಧರ್ ಸಭೆಗೆ ತಿಳಿಸಿದರು. 2020ರವರೆಗೆ ಹೆಚ್ಚುವರಿಯಾಗಿ ಸಮಯವಕಾಶ ನೀಡಿದ್ದು, ಗುತ್ತಿಗೆದಾರ ಸಂಸ್ಥೆ ತನ್ನ ಇತರೆ ಆಸ್ತಿಗಳನ್ನು ಮಾರಿ ಹಣ ಹೊಂದಿಸಿ ರಾ.ಹೆದ್ದಾರಿ ಕಾಮಗಾರಿ ಮುಗಿಸಬೇಕಿದೆ ಎಂದು ತಾಕೀತು ಮಾಡಿದರು.
ರಾತ್ರಿ ಸಂಚಾರ ನಿಷೇಧದ ಪರ ರಾಜ್ಯ: ಇದೇ ವೇಳೆ, ನೆರೆಯ ಕೇರಳಕ್ಕೆ ಪರ್ಯಾಯ ಮಾರ್ಗ ಬದಲಿಸಲು ರಾಜ್ಯದ ಅಭಿಪ್ರಾಯ ಕೇಳಿರುವ ಸುಪ್ರೀಂಕೋರ್ಟಿಗೆ ಹಗಲು ಸಂಚಾರ ಯಥಾಸ್ಥಿತಿಯಲ್ಲಿಟ್ಟು, ರಾತ್ರಿ ಸಂಚಾರ ನಿಷೇಧ ಮುಂದುವರೆಸಬೇಕೆಂಬುದು ರಾಜ್ಯದ ನಿಲುವಾಗಿದೆ. ಯಾವುದೇ ಎಲಿವೇಟರ್ ಕಾರಿಡಾರ್ ಯೋಜನೆ ಬೇಡ ಎಂಬುದು ರಾಜ್ಯದ ನಿಲುವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಹದಿನಾಲ್ಕುವರೆ ತಾಸು ಕಾರ್ಯಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸತತ ಹದಿನಾಲ್ಕುವರೆ ತಾಸು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಆಯುಷ್ಮಾನ್ ಭಾರತ ಕಾರ್ಯಕ್ರಮ, ವೈದ್ಯ ಸಮ್ಮೇಳನ, ರಾ.ಹೆದ್ದಾರಿ ಕಾಮಗಾರಿ ಮತ್ತು ಸಕಾಲ ಯೋಜನೆಯ ಅಧಿಕಾರಿಗಳ ಸಭೆಗೆ ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಗೈರಾಗಿ ತಮ್ಮ ಅಸಮಾಧಾನ ಹೊರಹಾಕಿದರು.